
ಬೆಂಗಳೂರು: ಚಂದನ ವಾಹಿನಿಯಲ್ಲಿ ಇದೇ 23ರಿಂದ 5, 6 ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳಿಗೆ 'ಸಂವೇದಾ ಇ-ಕ್ಲಾಸ್' ಕಲಿಕಾ ಕಾರ್ಯಕ್ರಮ ಪ್ರಸಾರವಾಗಲಿದೆ.
'ಶಾಲೆಗಳ ಆರಂಭ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಈಗಾಗಲೇ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ಪಾಠಗಳನ್ನು ಕೇಳುತ್ತಿದ್ದು, ಈಗ, 5,6 ಮತ್ತು 7ನೇ ತರಗತಿಗಳಿಗೂ ಇದನ್ನು ವಿಸ್ತರಿಸಲಾಗಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹೇಳಿದ್ದಾರೆ.
ಈ ತರಗತಿಗಳ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಹಾಗೂ ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ವಿಡಿಯೊ ಪಾಠಗಳನ್ನು ಪ್ರಸಾರ ಮಾಡಲಾಗುತ್ತದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8ರಿಂದ 9.30 ಮತ್ತು ಸಂಜೆ 5.30ರಿಂದ 6ರವರೆಗೆ ಪಾಠಗಳು ಪ್ರಸಾರವಾಗಲಿವೆ.
ಪ್ರತಿ ದಿನ 4 ಪಾಠಗಳನ್ನು, ಪ್ರತಿ ಪಾಠ 30 ನಿಮಿಷಗಳ ಅವಧಿಯಂತೆ 2 ತಾಸು ನಡೆಸಲಾಗುತ್ತದೆ. ಈ ವೇಳಾಪಟ್ಟಿಯಂತೆ ಡಿ.25ರವರೆಗೆ ಪ್ರಸಾರ ಮಾಡಲಾಗುತ್ತದೆ.
(ಮಾಹಿತಿ ಕೃಪೆ ಪ್ರಜಾವಾಣಿ)