ಬೆಂಗಳೂರು : ಕಳೆದ ಒಂದೂವರೆ ತಿಂಗಳಿನಿಂದ ಮುಚ್ಚಿದ್ದ ಮಧ್ಯದ ಅಂಗಡಿಗಳು ನಾಳೆ ರಾಜ್ಯಾದ್ಯಂತ ( ಕಂಟೋನ್ಮೆಂಟ್ ಹೊರತುಪಡಿಸಿ) ತೆರೆಯಲಿದ್ದು, ಭಾನುವಾರದಿಂದಲೇ ಎಣ್ಣೆ ಪ್ರಿಯರು ದಾಂಗುಡಿ ಇಟ್ಟಿದ್ದಾರೆ. ಇದರ ನಡುವೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಮಾರ್ಗಸೂಚಿ ಹೊರಡಿಸಿದೆ. ಜೊತೆಗೆ ಕೆಲವು ಷರತ್ತುಗಳನ್ನು ವಿಧಿಸಿದೆ.
ಕಂಟೈನ್‍ಮೆಂಟ್ ಝೋನ್ ವ್ಯಾಪ್ತಿಯ ಜನರಿಗೂ ಎಣ್ಣೆ ಬೇಕು ಅಂದರೆ ಸರಿಯಾಗಿ ಲಾಕ್‍ಡೌನ್ ನಿಯಮ ಪಾಲಿಸಿ ಸೋಂಕು ಮುಕ್ತ ಝೋನ್ ಆಗಬೇಕಿದೆ. ಸರಿಯಾಗಿ ನಿಯಮ ಪಾಲಿಸದಿದ್ದರೆ, ನೂಕು ನುಗ್ಗಲು ಉಂಟಾದರೆ ತಕ್ಷಣ ಮದ್ಯದಂಗಡಿ ಮುಚ್ಚುವುದಾಗಿ ಅಬಕಾರಿ ಸಚಿವ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಮದ್ಯದಂಗಡಿ ತೆರೆಯುವ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಸನ್ನದುದಾರರಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ.ಅಲ್ಲದೇ ಒಬ್ಬರಿಗೆ ಎಷ್ಟು ಲೀಟರ್ ಮದ್ಯ ನೀಡಬೇಕು ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ.
ಪ್ರತಿ ಮದ್ಯದಂಗಡಿ ಮುಂಭಾಗ ಬ್ಯಾರಿಕೇಡ್ ಅಳವಡಿಸಬೇಕು, ಬ್ಯಾರಿಕೇಡ್ ನ ಒಳಭಾಗದಲ್ಲಿ ಕೇವಲ ಐದು ಜನ ಮಾತ್ರ ಇರಲು ಅವಕಾಶ ನೀಡಬೇಕು. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಅಂಗಡಿ ತೆರೆಯಲು ಅನುಮತಿ ನೀಡಬೇಕು, ಪೊಲೀಸರು ಇದ್ದರೂ, ಸ್ವಂತ ಖರ್ಚಿನಲ್ಲಿ ಭದ್ರತಾ ಸಿಬ್ಭಂಧಿಗಳನ್ನು ನೇಮಿಸಿಕೊಳ್ಳಬೇಕೆಂದು ಎಂದು ಮದ್ಯದಂಗಡಿ ಮಾಲೀಕರಿಗೆ ಸೂಚನೆ ನೀಡಲಾಯಿತು.
ಒಬ್ಬರಿಗೆ 4 ಫುಲ್ ಬಾಟಲ್ ಬಿಯರ್, 6 ಪಿಂಟ್ ಬಾಟಲಿ, 2.3 ಲೀ. (6 ಕ್ವಾಟರ್ ಅಥವಾ ಒಂದುವರೆ ಬಾಟಲ್) ಮಾತ್ರ ನೀಡುವಂತೆ ಆದೇಶ ನೀಡಲಾಗಿದೆ. ಮದ್ಯ ಹೊರತುಪಡಿಸಿ, ಕೌಂಟರ್ ನಲ್ಲಿ ಬೇರೆ ಪದಾರ್ಥ ಅಥವಾ ನೀರು ಕೂಡ ನೀಡುವಂತಿಲ್ಲ.ಮದ್ಯದಂಗಡಿ ಪಕ್ಕದ ಗೂಡಂಗಡಿಗಳಲ್ಲಿಯೂ ಮದ್ಯ ಸೇವನೆ ಮಾಡುವಂತಿಲ್ಲ. ಮದ್ಯ ಮಾರಾಟ ವೇಳೆ ಕೈಗವಸು ಮತ್ತು ಮಾಸ್ಕ್ ಬಳಸಲು ಸೂಚನೆ ನೀಡಲಾಗಿದೆ.
ಮದ್ಯದಂಗಡಿ ಮುಂಭಾಗ ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದು, ಎಲ್ಲಾ ಮದ್ಯದಂಗಡಿ ಮುಂಭಾಗ ದಲ್ಲಿ ಸಿಸಿ ಟಿವಿ ಅಳವಡಿಕೆ ಕಡ್ಡಾಯವಾಗಿದೆ. ಜಿಲ್ಲೆಯಲ್ಲಿನ 260 ಅಂಗಡಿಗಳ ಪೈಕಿ, ಕೇವಲ 155 ಅಂಗಡಿಗಳನ್ನು ತೆರೆಯಲು ಮಾತ್ರ ಅವಕಾಶ ನೀಡಲಾಗಿದೆ.
ರಾಜ್ಯದ ಮೂರು ಜಿಲ್ಲೆಗಳು (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು) ಕೆಂಪು ವಲಯಕ್ಕೆ ಸೇರಿವೆ. ಕಿತ್ತಲೆ ವಲಯದಲ್ಲಿ 13 ಜಿಲ್ಲೆಗಳಿದ್ದು, ಹಸಿರು ವಲಯದಲ್ಲಿ 14 ಜಿಲ್ಲೆಗಳಿವೆ. ಈ ಮೂರು ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ, ಕೆಂಪು ವಲಯದಲ್ಲಿ ಕೆಲ ನಿಯಮಗಳು ಅನ್ವಯವಾಗಲಿದೆ.
ಹಸಿರು ಮತ್ತು ಹಳದಿ ವಲಯದಲ್ಲಿ ಎಲ್ಲ ಸೇವೆಗಳು ನಾಳೆಯಿಂದ ಆರಂಭವಾಗಲಿದೆ. ಅದರಂತೆ ಮದ್ಯ ಮತ್ತು ಪಾನ್ ಶಾಪ್ಗಳು ತೆರೆಯಲಿವೆ. ಆದರೆ, ಬಾರ್ ಆಯಂಡ್ ರೆಸ್ಟೋರೆಂಟ್ಗಳನ್ನು ತೆರೆಯಲು ಅವಕಾಶವಿಲ್ಲ. ಕೇವಲ ಎಂಎಸ್ಐಎಲ್ ಮತ್ತು ವೈನ್ ಶಾಪ್ ತೆರೆಯಲು ಅವಕಾಶ ನೀಡಲಾಗಿದೆ.
ಇಲ್ಲೂ ಸಹ ಒಬ್ಬರಿಂದ ಒಬ್ಬರಿಗೆ ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಐದಕ್ಕಿಂತ ಹೆಚ್ಚು ಜನರು ಸ್ಥಳದಲ್ಲಿ ಇರುವಂತಿಲ್ಲ. ಪಾರ್ಸೆಲ್ಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ಕೆಂಪು ವಲಯದ ಜಿಲ್ಲೆಗಳಲ್ಲಿ ನಾಲ್ಕು ವಿಭಾಗಗಳನ್ನಾಗಿ ಮಾಡಲಾಗಿದ್ದು, ಕಂಟೈನ್ಮೆಂಟ್ ಮತ್ತು ರೆಡ್ ಜೋನ್ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ.
ಆಯಾ ನಗರ ಪಾಲಿಕೆ ವಲಯವಾರು ವಿಂಗಡಣೆ ಮಾಡಿದ್ದು, ಅದರಂತೆ ಹಸಿರು ಮತ್ತು ಕಿತ್ತಲೆ ವಲಯದಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.ಕೊನೆಯ 21 ದಿನದಿಂದ ಪ್ರಕರಣ ಪತ್ತೆ ಆಗದ ಸ್ಥಳಗಳು ಗ್ರೀನ್ ಝೋನ್ ಎಂದು ಗುರುತಿಸಲಾಗಿದೆ.
ಗ್ರೀನ್ ಹಾಗೂ ರೆಡ್ ಝೋನ್ ಬೈಫರಿಕೇಟ್ ಮಾಡಲಾಗದ ಸ್ಥಳ ಅರೆಂಜ್ ಝೋನ್ ಪಟ್ಟಿಯಲ್ಲಿರಲಿವೆ. ರಾಜ್ಯ ಸರ್ಕಾರ ಬಹುತೇಕ ಕೇಂದ್ರದ ಮಾರ್ಗಸೂಚಿಗಳನ್ನು ಯಥಾವತ್ತು ಪಾಲಿಸಿದೆ. ಮೂರು ವಲಯಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
# ಸರದಿಯಲ್ಲಿ ನಿಂತ ಜನ
ಬೆಂಗಳೂರಿನಲ್ಲಿ ಲಾಕ್ ಡೌನ್ ನಿಂದಾಗಿ 40 ದಿನಗಳಿಂದ ಮದ್ಯ ಇಲ್ಲದೆ ತತ್ತರಿಸಿದ್ದ ಮದ್ಯಪ್ರಿಯರು ನಾಳೆಯಿಂದ ಬೆಳಗ್ಗೆಯಿಂದ ಮದ್ಯ ಸಿಗುತ್ತದೆ ಅಂತಾ ಇಂದಿನಿಂದಲೇ ಬೆಂಗಳೂರಿನಲ್ಲಿ ಕ್ಯೂ ನಿಂತಿದ್ದಾರೆ.
ನಗರದ ಬಳೆಪೇಟೆಯಲ್ಲಿರುವ ಬೆಲ್ ವೈನ್ಸ್ ಮುಂದೆ ನೂರಾರು ಸಂಖ್ಯೆಯಲ್ಲಿ ಮದ್ಯಪ್ರಿಯರು ಸಾಲು ಗಟ್ಟಿ ನಿಂತಿದ್ದಾರೆ. ಇದೇ ವೇಳೆ ಸಾಮಾಜಿಕ ಅಂತವನ್ನು ಕುಡುಕರು ಪಾಲಿಸುತ್ತಿದ್ದಾರೆ. ಇದೇ ವೇಳೆ ಬೂದಿಕೋಟೆ ಗ್ರಾಮದಲ್ಲಿ ಮದ್ಯದಂಗಡಿಗೆ ಪೂಜೆ ಸಹ ಮಾಡಿದ್ದಾರೆ. ಇನ್ನು ಹಲವು ಮದ್ಯದಂಗಡಿ ಮಾಲೀಕರು ಅಂಗಡಿಗಳಿಗೆ ಸಿರಿಯಲ್ ಸೆಟ್ ಅನ್ನು ಹಾಕಿಸಿದ್ದಾರೆ.
ಲಾಕ್ ಡೌನ್ ನಿಂದಾಗಿ ದೇಶಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಆದರೆ ಇದೀಗ ರೆಡ್, ಆರೆಂಜ್ ಮತ್ತು ಗ್ರೀನ್ ಜೋನ್ ಗಳಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಮೇ 17ರವರೆಗೂ ಲಾಕ್ಡೌನ್ ವಿಸ್ತರಣೆಯಲ್ಲಿ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ರಾಜ್ಯ ಸರ್ಕಾರ ಶನಿವಾರ ಹೊಸ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಿದೆ.
ಕೇಂದ್ರದ ಹೊಸ ಮಾರ್ಗಸೂಚಿಯನ್ನು ಯಥಾವತ್ತಾಗಿ ಪಾಲನೆ ಮಾಡಲು ಸಿಎಂ ಸಮ್ಮತಿ ನೀಡಿದ್ದಾರೆ. ಇದರ ಪ್ರಕಾರ ರೈಲು ಪ್ರಯಾಣ ಮತ್ತು ಅಂತರ್‌ರಾಜ್ಯ ಪ್ರಯಾಣಕ್ಕೆ ಅವಕಾಶ ಇಲ್ಲ. ಮೆಟ್ರೋ ರೈಲು ಸಂಚಾರ, ಶಾಲಾ-ಕಾಲೇಜುಗಳು, ಚಲನಚಿತ್ರ ಮಂದಿರಗಳು, ಮಾಲ್‌ಗಳು, ಜಿಮ್, ಸ್ವಿಮ್ಮಿಂಗ್ ಪೂಲ್ಸ್, ಎಂಟರ್ಟೈನ್ಮೆಂಟ್ ಪಾರ್ಕ್ಸ್ ತೆರೆಯಲು ಅನುಮತಿ ನೀಡಿಲ್ಲ.
# ಷರತ್ತುಗಳು ಏನು..,?
1. ಕಂಟೈನ್‍ಮೆಂಟ್ ಝೋನ್ ಬಿಟ್ಟು ಉಳಿದೆಡೆ ಮದ್ಯ ಮಾರಾಟ
2. ವೈನ್‍ಶಾಪ್, ಎಂಆರ್‌ಪಿ, ಎಂಎಸ್‍ಐಎಲ್‍ಗಳಲ್ಲಿ ಮದ್ಯ ಮಾರಾಟ
3. ಬೆಳಗ್ಗೆ 9ರಿಂದ ಸಂಜೆ 7 ಗಂಟೆಯವರೆಗೂ ವೈನ್‍ಶಾಪ್ ಓಪನ್
4. ವೈನ್ ಶಾಪ್‍ನಲ್ಲಿ ಮದ್ಯಪಾನ ಇಲ್ಲ, ಪಾರ್ಸಲ್‍ಗಷ್ಟೇ ಅವಕಾಶ
5. ಸೂಪರ್ ಮಾರ್ಕೆಟ್ ಗಳಲ್ಲಿ ಮದ್ಯ ಮಾರಾಟ ಇರಲ್ಲ
6. ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುವಂತೆ ಇಲ್ಲ
7. ಮದ್ಯ ಕೊಂಡುಕೊಳ್ಳುವ ಗ್ರಾಹಕರಿಗೆ ಮಾಸ್ಕ್ ಕಡ್ಡಾಯ
8. ಮದ್ಯದಂಗಡಿಯಲ್ಲಿ ಸ್ಯಾನಿಟೈಸರ್ ಬಳಕೆ ಕಡ್ಡಾಯ
9. 5 ಜನ ಮಾತ್ರ ಇರುವಂತೆ ನೋಡಿಕೊಳ್ಳಬೇಕು
10. 6 ಅಡಿ ಸಾಮಾಜಿಕ ಅಂತರ ಇರಬೇಕು.