ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ತಿಂಗಳಿಗೊಮ್ಮೆ ಸರಳ ಸಾಮೂಹಿಕ ವಿವಾಹ ನಡೆಯಲಿದೆ. ಈ ವರ್ಷ ಮಾ.31, ಏ.25, ಮೇ 21, ಜೂ.27 ಹಾಗೂ ಜು.7ರಂದು ಸರಳ ಸಾಮೂಹಿಕ ವಿವಾಹವು ಬೆಳಗ್ಗಿನ ಅಭಿಜಿನ್ ಲಗ್ನ ಸುಮೂಹೂರ್ತದಲ್ಲಿ ಸಂಪ್ರದಾಯಗಳಿಗೆ ಅನುಗುಣವಾಗಿ ನೆರವೇರಲಿದೆ ಎಂದು ಶ್ರೀ ದೇವಳದ ಆಡಳಿತಾಧಿಕಾರಿ ಹಾಗೂ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿಯ ಮೇಲ್ಮಹಡಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಾಮೂಹಿಕ ವಿವಾಹ(Marriage)ವಾಗಲು ಬಯಸುವ ವಧು ವರರು ದೇವಳದ ಕಚೇರಿಯನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆದುಕೊಳ್ಳಬಹುದು ಅಥವಾ 7795489588, 8762919833, 9448529828ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ಧನ ಸಹಕಾರ: ಸರಳ ವಿವಾಹವಾಗುವ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್(Shirt), ಶಲ್ಯ, ಪೇಟ, ಬಾಸಿಂಗ ಇತ್ಯಾದಿಗಳಿಗೆ ರು.5 ಸಾವಿರ ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ, ಕಾಲುಂಗುರ ಇತ್ಯಾದಿಗಳಿಗೆ ರು.10 ಸಾವಿರ ನೀಡಲಾಗುವುದು. ರು. 40 ಸಾವಿರ ಮೌಲ್ಯದ ಅಂದಾಜು 8 ಗ್ರಾಂ ತೂಕದಲ್ಲಿ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡನ್ನು ದೇವಾಲಯದಿಂದ ಭರಿಸಲಾಗುವುದು.ಈ ಮೂಲಕ ಕಂದಾಯ ಇಲಾಖೆಯಿಂದ ಆದರ್ಶ ವಿವಾಹ ಯೋಜನೆಯಡಿಯಲ್ಲಿ ರು.10 ಸಾವಿರದ ನಿಶ್ಚಿತ ಠೇವಣಿ ನೀಡಲಾಗುವುದು. ಅಲ್ಲದೆ ಸಾಮೂಹಿಕ ವಿವಾಹದಲ್ಲಿ ವಿವಾಹವಾಗುವ ಪರಿಶಿಷ್ಟಜಾತಿಯ ಜೋಡಿಗೆ ಸರಳ ವಿವಾಹ ಯೋಜನೆಯಡಿಯಲ್ಲಿ ರೂ.50 ಸಾವಿರ ಒದಗಿಸಲಾಗುವುದು. ಸಾಮೂಹಿಕ ಸರಳ ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಆವಶ್ಯಕ ವ್ಯವಸ್ಥೆಗಳನ್ನು ದೇವಾಲಯದಿಂದ ಮಾಡಲಾಗುವುದು ಎಂದು ಡಾ.ಯತೀಶ್ ಉಳ್ಳಾಲ್ ಹೇಳಿದರು.
(ಮಾಹಿತಿ ಕೃಪೆzee kannada)