
ಬೆಂಗಳೂರು, ಸೆ. 26: ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯರ ತೀವ್ರ ವಿರೋಧದ ಮಧ್ಯೆಯೇ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಅದಕ್ಕೂ ಮೊದಲು ಸುದೀರ್ಘ ಚರ್ಚೆ ವಿಧೇಯಕದ ಮೇಲೆ ನಡೆಯಿತು. ಒಂದಿಷ್ಟು ತಿದ್ದುಪಡಿಗಳಿಗೆ ಸರ್ಕಾರ ಒಪ್ಪಿದ್ದು ವಿಶೇಷ.
ವಿಧೇಯಕದ ಪ್ರಕಾರ ಇನ್ನುಮುಂದೆ ಯಾರು ಬೇಕಾದರೂ ಕೃಷಿ ಜಮೀನು ಖರೀದಿ ಮಾಡಬಹುದು. ಇಲ್ಲಿಯವರೆಗೆ ಕೃಷಿಕರು ಮಾತ್ರ ಕೃಷಿ ಜಮೀನು ಖರೀದಿ ಮಾಡಲು ಅವಕಾಶವಿತ್ತು. ಕೃಷಿಯೇತರರಿಗೂ ಕೃಷಿ ಭೂಮಿ ಖರೀದಿಗೆ ಅವಕಾಶ ಕೊಡುವುದರಿಂದ ಕೆಟ್ಟ ಪರಿಣಾಮಗಳಾಗುತ್ತವೆ ಎಂಬುದು ಸೇರಿದಂತೆ ಹಲವು ತಿದ್ದುಪಡಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು.
ಈ ಹೊಸ ತಿದ್ದುಪಡಿಯಲ್ಲಿ ನೀರಾವರಿ ಪ್ರದೇಶದಲ್ಲಿ ಖರೀದಿ ಮಾಡುವ ಜಮೀನು ಕೃಷಿಗೆ ಮಾತ್ರ ಬಳಕೆಯಾಗಬೇಕು ಎಂಬುದನ್ನು ಸೇರಿಸಲಾಗಿದೆ. ಜೊತೆಗೆ 5 ಜನರಿರುವ ಒಂದು ಕುಟುಂಬ ಗರಿಷ್ಠ 54 ಎಕರೆ ಕೃಷಿ ಜಮೀನು ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. 5ಕ್ಕಿಂತ ಹೆಚ್ಚು ಇರುವ ಕುಟುಂಬ ಗರಿಷ್ಠ 108 ಎಕರೆ ಜಮೀನು ಖರೀದಿ ಮಾಡಬಹುದು. ಕೃಷಿ ಜಮೀನು ಖರೀದಿಸಲು ಈ ಹಿಂದೆ ಇದ್ದ 25 ಲಕ್ಷ ರೂ ವಾರ್ಷಿಕ ಆದಾಯ ಮಿತಿ ರದ್ದು ಮಾಡಿರುವುದಕ್ಕೂ ರೈತ ಸಂಘಟನೆಗಳು ಹಾಗೂ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು.

ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕದ ಕುರಿತು ಚರ್ಚೆ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ವಿಧೇಯಕವನ್ನು ಸಮರ್ಥಿಸಿಕೊಂಡರು. ಭೂಕಂದಾಯ ಕಾಯ್ದೆ 79 ಎ ತಿದ್ದುಪಡಿ ಮಾಡಲು ಪ್ರೊ. ನಂಜುಂಡಸ್ವಾಮಿ ಅವರೇ ಹೇಳಿದ್ದರು. ಹಿಂದೆ ವಿಧಾನಸಭೆ ಕಲಾಪದಲ್ಲೇ ರೈತ ನಾಯಕ ನಂಜುಂಡಸ್ವಾಮಿ ಕಾಯ್ದೆ ಬದಲಾವಣೆಗೆ ಒತ್ತಾಯಿಸಿದ್ದರು. ಈಗ ಕಾಂಗ್ರೆಸ್ ನಲ್ಲಿರುವ ಆರ್ ವಿ ದೇಶಪಾಂಡೆ ಅವರೂ ಕಾಯ್ದೆ ಬದಲಾವಣೆಗೆ ಒತ್ತಾಯ ಮಾಡಿದ್ದರು. ಕಾಯ್ದೆ ಬದಲಾವಣೆಗೆ ಕಾಂಗ್ರೆಸ್ ನಾಯಕರೇ ಒತ್ತಾಯ ಮಾಡಿ ಈಗ ಉಲ್ಟಾ ಮಾತಾಡ್ತಿದ್ದಾರೆ. ಈಗ ಕಾಂಗ್ರೆಸ್ ಅಧ್ಯಕ್ಷರಾಗಿರುವವರು ಈ ಹಿಂದೆ ಕಾಯ್ದೆ ಬದಲಾವಣೆ ಮಾಡಲು ಒತ್ತಾಯ ಮಾಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಅಶೋಕ್ ವಾಗ್ದಾಳಿ ಮಾಡಿದರು.
ಕನಕಪುರ ರಸ್ತೆಯಲ್ಲಿ ರವಿಶಂಕರ್ ಗುರೂಜಿಯವರು ಜಮೀನು ಪಡೆಯಲು ಸಾಧ್ಯವಾಗಲಿಲ್ಲ. ತಮ್ಮ ಸಿಬ್ಬಂದಿಯ ಮೂಲಕ ಜಮೀನು ಖರೀದಿಸಬೇಕಾಯ್ತು ಅಂತ ಹೇಳಿದ್ದರು. ಪರೋಕ್ಷವಾಗಿ ಕಾಯ್ದೆ ಬಗ್ಗೆ ಬದಲಾವಣೆ ಮಾಡಲು ಒತ್ತಾಯಿಸಿದ್ದರು ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್. ಅಶೋಕ್ ಅವರು ವಾಗ್ದಾಳಿ ಮಾಡಿದರು.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ