ಬೆಂಗಳೂರು, ಮಾ. 08: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ತಮ್ಮ 8ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ರವಿವಾರ ಇಡೀ ದಿನ ಬಜೆಟ್‌ಗೆ ಅಂತಿಮ ಸ್ಪರ್ಷ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಜೆಯ ನಿನ್ನೆ ಹೊತ್ತಿಗೆ ಮಂಡನೆಗೆ ಸಿದ್ಧವಾಗಿದ್ದ ಬಜೆಟ್‌ನ್ನು ಸಂಪೂರ್ಣವಾಗಿ ಓದಿ ಪರಿಶೀಲನೆ ನಡೆಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರು 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಒಂದಿಲ್ಲೊಂದು ಸಂಕಷ್ಟಗಳನ್ನು ಅವರು ಎದುರಿಸಿದ್ದಾರೆ. ಏಕ ವ್ಯಕ್ತಿ ಸಂಪುಟದ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇಡೀ ರಾಜ್ಯಾದ್ಯಂತ ಜಲ ಪ್ರಳಯ ಉಂಟಾಗಿತ್ತು. ಅದಾದ ಬಳಿಕ ಸರ್ಕಾರ ಉಳಿಸಿಕೊಳ್ಳಲು ಅತಿದೊಡ್ಡ ಉಪ ಚುನಾವಣೆ ಸವಾಲು ಎದುರಿಸಿದರು. ಅದೆಲ್ಲ ಮುಗಿಯಿತು ಎನ್ನುವಷ್ಟರಲ್ಲಿ ಇಡೀ ಜಗತ್ತಿಗೆ ಕೊರೊನಾ ಸಂಕಷ್ಟ ಎದುರಾಗಿತ್ತು. ಕೊರೊನಾ, ಲಾಕ್‌ಡೌನ್‌ನಿಂದಾಗಿ ಇಡೀ ಜಗತ್ತಿನ ಆರ್ಥಿಕ ವ್ಯವಸ್ಥೆ ತೀರಾ ಹದಗೆಟ್ಟಿದೆ, ಅದಕ್ಕೆ ನಮ್ಮ ರಾಜ್ಯ ಹೊರತಾಗಿಲ್ಲ. ಈ ಸಂಕಷ್ಟದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು ಇಂದು ತಮ್ಮ 8ನೇ ಬಜೆಟ್‌ನ್ನು ಮಂಡಿಸುತ್ತಿದ್ದಾರೆ.
ಈ ಹಿಂದೆ ಯಾವ ಹಣಕಾಸು ಸಚಿವರೂ ಎದುರಿಸದ ಆರ್ಥಿಕ ಸಂಕಷ್ಟಗಳನ್ನು ಇಂದು ಸಿಎಂ ಯಡಿಯೂರಪ್ಪ ಎದುರಿಸುತ್ತಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರು ಮಂಡಿಸುವ ಬಜೆಟ್ ತೀವ್ರ ಕುತೂಹಲ ಮೂಡಿಸಿದೆ. ಇದೇ ಸಂದರ್ಭದಲ್ಲಿ ಜನ-ಸಾಮಾನ್ಯರಿಗೆ ಹೊರೆಯಾಗದ ಬಜೆಟ್‌ನ್ನು ಮಂಡನೆ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರು ಮೊದಲೇ ಭರವಸೆ ಕೊಟ್ಟಿದ್ದಾರೆ.
ಇಂದು ಸರಿಯಾಗಿ 12.05ಕ್ಕೆ ಬಜೆಟ್ ಮಂಡನೆ
ಇಂದು ಮಧ್ಯಾಹ್ನ ಸರಿಯಾಗಿ 12.05 ನಿಮಿಷಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಣಕಾಸು ಸಚಿವರಾಗಿ ವಿಧಾನಸಭೆಯಲ್ಲಿ 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಭಾನುವಾರ ಬಜೆಟ್ ಪ್ರತಿಗೆ ಸಿಎಂ ಯಡಿಯೂರಪ್ಪ ಅವರು ಅಂತಿಮ ಸ್ಪರ್ಷ ಕೊಟ್ಟಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಲಾಕ್‌ಡೌನ್-ಪ್ರವಾಹ-ಬರದ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಯಾರಿಗೂ ಹೊರೆಯಾಗದ ಸಮತೋಲಿತ ಬಜೆಟ್ ಮಂಡನೆ ಮಾಡುವುದಾಗಿ ಸಿಎಂ ಹೇಳಿದ್ದಾರೆ.
ಕೃಷಿ ಕಾನೂನುಗಳ ವಿರೋಧ ಕಡಿಮೆ ಮಾಡಲು
ಆರ್ಥಿಕ ಸಂಕಷ್ಟದಿಂದಾಗಿ ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿರುವ ಅನುದಾನದಲ್ಲಿ ಶೇಕಡಾ 60 ರಷ್ಟು ಮಾತ್ರ ವೆಚ್ಚವಾಗಿದೆ. ಬಾಕಿ ಅನುದಾನವನ್ನೂ ಗಣನೆಗೆ ತೆಗೆದುಕೊಂಡು ಈ ವರ್ಷದ ಬಜೆಟ್ ಗಾತ್ರವನ್ನು ಯಡಿಯೂರಪ್ಪ ಹೆಚ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ಕೊರೊನಾ ಸಾಂಕ್ರಾಮಿಕ ಸಂಕಷ್ಟದಿಂದ ಹೊರ ಬರಲು ಆರೋಗ್ಯ ಕ್ಷೇತ್ರ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಕುರಿತು ಹೆಚ್ಚುತ್ತಿರುವ ವಿರೋಧ ಕಡಿಮೆ ಮಾಡಲು ಈ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂಬ ಮಾಹಿತಿಯಿದೆ.
ಗೋಹತ್ಯೆ ನಿಷೇಧ-ಗೋಶಾಲೆ ಸ್ಥಾಪನೆ
ರಾಜ್ಯ ಸರ್ಕಾರ ಗೋಹತ್ಯೆೆ ನಿಷೇಧ ಕಾನೂನು ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಗೋಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಪ್ರತಿ ತಾಲೂಕಿಗೆ ಎರಡು ಗೋಶಾಲೆ ಆರಂಭಿಸಲು ವಿವಿಧ ಮೂಲಗಳಿಂದ ಆರ್ಥಿಕ ನೆರವು ಪಡೆಯುವ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡಲಿದ್ದಾರೆ. ಜೊತೆಗೆ ಈಗಾಗಲೇ ಪ್ರತಿ ತಾಲೂಕಿನಲ್ಲಿ ಎರಡು ಗೋಶಾಲೆಗಳಿದ್ದು, ಅವುಗಳಿಗೆ ಕೊರತೆಯಾಗಿರುವ ಅನುದಾನ ಕೊಡುವ ಸಾಧ್ಯತೆಯಿದೆ.
ಕೃಷಿ ಕ್ಷೇತ್ರಕ್ಕೆ ಆದ್ಯತೆ ನಿರೀಕ್ಷೆ
ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲು ಕೃಷಿ ಯಂತ್ರೋಪಕರಣಗಳಿಗೆ ವಿಶೇಷ ರಿಯಾಯ್ತಿ ಹಾಗೂ ಸೌಲಭ್ಯ ನೀಡುವ ಸಾಧ್ಯತೆಯೂ ಇದೆ. ಅಲ್ಲದೇ, ಕೃಷಿ ಆಧಾರಿತ ಉದ್ಯಮಗಳ ಸ್ಥಾಪನೆಗೆ ಬಜೆಟ್‌ನಲ್ಲಿ ವಿಶೇಷ ಸಬ್ಸಿಡಿ ಕೊಡುವ ನಿರೀಕ್ಷೆ ಇದೆ.
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕೆಂಬ ಬೇಡಿಕೆ ಹೆಚ್ಚಿರುವುದರಿಂದ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗೆ ವಿಶೇಷ ಆವರ್ತ ನಿಧಿ ಘೋಷಣೆ ಮಾಡುವ ನಿರೀಕ್ಷೆ ಇದೆ. ಅಲ್ಲದೇ, ರಾಜ್ಯದಲ್ಲಿಯೇ ಬೆಳೆಯುವ ಭತ್ತ, ರಾಗಿ, ಜೋಳವನ್ನು ಪಡಿತರ ವ್ಯವಸ್ಥೆಗೆ ಬಳಕೆ ಮಾಡಲು ಇಲ್ಲಿಯೇ ಖರೀದಿ ಮಾಡುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಇತಿಹಾಸದಲ್ಲಿಯೇ ಹೆಚ್ಚು ಸಾಲ ಪಕ್ಕಾ! ಈಗಾಗಲೇ ರಾಜ್ಯ ಸರ್ಕಾರ ಕೊರೊನಾ ಸಂಕಷ್ಟದಿಂದ ಪಾರಾಗಲು ಬೇರೆ ಮೂಲಗಳಿಂದ ಸಾಲ ಪಡೆಯಲು ನಿರ್ಧರಿಸಿದ್ದು, ಕೇಂದ್ರ ಸರ್ಕಾರ ಕೂಡ ಆರ್ಥಿಕ ಶಿಸ್ತು ಕಾಯ್ದುಕೊಂಡು ಸಾಲ ಪಡೆಯಲು ಸೂಚಿಸಿದೆ. ಹೀಗಾಗಿ ಒಟ್ಟು ಜಿಡಿಪಿ ಮೇಲೆ ಶೇಕಡಾ 5ರಷ್ಟು ಸಾಲ ಪಡೆಯುವ ಪ್ರಮಾಣ ಹೆಚ್ಚಳ ಮಾಡುವ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಪೆಟ್ರೋಲ್ ಹಾಗೂ ಡೀಸೆಲ್ ಸೆಸ್ ಕಡಿಮೆ ಮಾಡದೇ ಅದರಿಂದ ಬರುವ ಆದಾಯವನ್ನು ಮೂಲ ಸೌಕರ್ಯ ನಿರ್ಮಾಣಕ್ಕೆ ಒತ್ತು ನೀಡುವ ನಿರೀಕ್ಷೆ ಇದೆ.
ಹನಿ ನೀರಾವರಿ ಯೋಜನೆಗೆ ಆದ್ಯತೆ
ರಾಜ್ಯದ ಪ್ರಮುಖ ಬೃಹತ್ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು, ಕೃಷ್ಣಾ ಕೊಳ್ಳದ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡುವುದು ಹಾಗೂ ಕಡಿಮೆ ಪ್ರಮಾಣದಲ್ಲಿ ನೀರು ಬಳಕೆ ಮಾಡಿಕೊಂಡು ಹೆಚ್ಚಿನ ಪ್ರದೇಶಕ್ಕೆೆ ನೀರಾವರಿ ಕಲ್ಪಿಸಲು ಹನಿ ನೀರಾವರಿ ಹಾಗೂ ಮೈಕ್ರೊ ಇರಿಗೇಶನ್ ಯೋಜನೆಗೆ ಆದ್ಯತೆ ನೀಡುವ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಮಹದಾಯಿ ಯೋಜನೆ ಆರಂಭಕ್ಕೆ ಬಜೆಟ್‌ನಲ್ಲಿ ಅನುದಾನ, ತುಂಗಭದ್ರಾಾ ನದಿಗೆ ನವಲಿ ಬಳಿ ಸಮತೋಲನ ಆಣೆಕಟ್ಟು ಕಟ್ಟಲು ಬಜೆಟ್‌ನಲ್ಲಿ ಹಣ ಮೀಸಲಿಡುವುದು. ಮೇಕೆದಾಟು ಯೋಜನೆ ಕಾರ್ಯಾರಂಭಕ್ಕೆ ಹಣ ಮೀಸಲಿಡುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಇನ್ನೂ ಹಲವು ಯೋಜನೆಗಳು
ಸಣ್ಣ ನೀರಾವರಿ ಇಲಾಖೆ ಮೂಲಕ ಕೆರೆಗಳ ನೀರು ತುಂಬಿಸುವ ಯೋಜನೆಗೆ ಮತ್ತಷ್ಟು ಆದ್ಯತೆ ನೀಡಲು ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡುವ ಸಾಧ್ಯತೆ ಇದೆ.
ಸಾರಿಗೆ ಇಲಾಖೆಯನ್ನು ಆರ್ಥಿಕವಾಗಿ ಬಲಗೊಳಿಸಲು ಪರ್ಯಾಯ ಆದಾಯಕ್ಕೆ ಪೂರಕ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಆನ್‌ಲೈನ್ ಶಿಕ್ಷಣದ ಕುರಿತು ಸರಿಯಾದ ನಿಯಮ ರೂಪಿಸುವ ಕುರಿತು ಪ್ರಸ್ತಾಪ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ವಿಶೇಷ ರಿಯಾಯ್ತಿ ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಇದೆ.
ಒಟ್ಟಾರೆ ಬಜೆಟ್ ನಿರೀಕ್ಷೆಗಳು ಹೀಗಿವೆ
- ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ, ಕೃಷಿ ಉತ್ಪನ್ನಗಳ ಖರೀದಿಗೆ ಆವರ್ತ ನಿಧಿ ಸ್ಥಾಪನೆ
- ನೀರಾವರಿ ಯೋಜನೆಗಗಳಿಗೆ ಆದ್ಯತೆ ನೀಡಿ, ಹನಿ ನೀರಾವರಿಗೆ ಆದ್ಯತೆ ಕೊಡಲು ತೀರ್ಮಾನ
- ಸಣ್ಣ ನೀರಾವರಿ ಇಲಾಖೆ ಮೂಲಕ ಕೆರೆ ತುಂಬಿಸುವ ಯೋಜನೆಗೆ ಹೆಚ್ಚಿನ ಅನುದಾನ
- ಪಡಿತರ ವ್ಯವಸ್ಥೆೆಗೆ ರಾಗಿ, ಜೋಳ, ಸೇರ್ಪಡೆ, ರಾಜ್ಯದಲ್ಲಿಯೇ ಭತ್ತ ಖರೀದಿ ಘೋಷಣೆ
- ಒಟ್ಟಾರೆ ಜಿಡಿಪಿ ಮೇಲೆ ಸಾಲದ ಪ್ರಮಾಣ ಹೆಚ್ಚಳ ಸಾಧ್ಯತೆ, ತೆರಿಗೆ ಹೆಚ್ಚಿಗೆ ಮಾಡದಿರಲು ನಿರ್ಧಾರ
- ಒತ್ತುವರಿಯಾಗಿರುವ ಗೋಮಾಳ ಸ್ವಾಧೀನಕ್ಕೆ ಹೊಸ ನೀತಿ ಪ್ರಕಟ
- ಸಾರಿಗೆ ಸಂಸ್ಥೆೆಗಳ ಆರ್ಥಿಕ ಪುನಃಶ್ಚೇತನಕ್ಕೆ ಹೊಸ ಯೋಜನೆ ಘೋಷಣೆ
- ತಂತ್ರಜ್ಞಾನ ಬಳಕೆ, ಕೃಷಿಯಾಧಾರಿತ ಕೈಗಾರಿಕೆಗಳಿಗೆ ಒತ್ತು
- ಬೆಂಬಲ ಬೆಲೆ ಯೋಜನೆಗೆ ಕಾನೂನಿನ ಸ್ವರೂಪ ಕೊಡುವುದು
- ಬೆಂಬಲ ಬೆಲೆ ಸಮನ್ವಯಕ್ಕಾಗಿ ಕರ್ನಾಟಕ ಕೃಷಿ ಸಂಶೋಧನಾ ಪರಿಷತ್ ರಚನೆ
- ಮಹಿಳೆಯರ ಸ್ವಾವಲಂಬನೆಗೆ ವಿಶೇಷ ರಿಯಾಯ್ತಿ ಯೋಜನೆ
- (ಮಾಹಿತಿ ಕೃಪೆ ಒನ್ ಇಂಡಿಯಾ ಕನ್ನಡ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ