ಸಾಮಾನ್ಯವಾಗಿ ಮಕ್ಕಳಿಗೆ ಓದುವ ಹವ್ಯಾಸ ಶುರುವಾಗುವುದು ಪತ್ತೆದಾರಿ ಪುಸ್ತಕಗಳ ಮೂಲಕ. ಇದರಲ್ಲಿ ಬರುವ ಕ್ಲಿಷ್ಟ ಸನ್ನಿವೇಶ, ವೈಜ್ಞಾನಿಕ ವಿವರ, ಅತ್ಯಾಧುನಿಕ ತಂತ್ರಜ್ಞಾನ… ಮುಂತಾದವು ಎಳೆಯ ಮನಸ್ಸಿಗೆ ಮುದ ನೀಡುವ ಕಾರಣ ಬಾಲ್ಯದ ಓದಿಗೆ ಎಲ್ಲಕ್ಕಿಂತ ಹೆಚ್ಚು ರುಚಿಸುವುದೇ ಇಂಥ ಪುಸ್ತಕಗಳು. ಇವುಗಳ ಪೈಕಿ ಶತಮಾನಗಳಿಂದಲೂ ಅತಿ ಹೆಚ್ಚು ಚಲಾವಣೆಯಲ್ಲಿ ಇರುವುದು ಡಿಟೆಕ್ಟಿವ್ ಷೆರ್ಲಾಕ್ ಹೋಮ್ಸ್.
ಷೆರ್ಲಾಕ್ ಹೋಮ್ಸ್ ಪುಸ್ತಕದ ಲೇಖಕ ಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಹುಟ್ಟಿದ ದಿನವಾದ ಮೇ 22. ಈ ದಿನವನ್ನು ಷೆರ್ಲಾಕ್ ಹೋಮ್ಸ್ ಬರ್ತ್‌ಡೇ ಎಂದು ಆಚರಿಸಲಾಗುತ್ತದೆ
ಮನು ಎಚ್.ಎಸ್. ಹೆಗ್ಗೋಡು
ಲಂಡನ್ ನಗರದ ಬೇಕರ್ ರಸ್ತೆಯ ಮನೆ ನಂಬರ್ 221B ಯಲ್ಲಿ ವಾಸಿಸುತ್ತಿರುವ, ಸದಾ ಕಪ್ಪು ಕನ್ನಡಕ ಧರಿಸಿರುವ ನುಣುಪು ಕೆನ್ನೆಯ ಷೆರ್ಲಾಕ್ ಹೋಮ್ಸ್‌ಗೆ ಈಗ ಹತ್ತಿರ 135 ವರ್ಷಗಳು! ಮೇ 22 ಈತನ ಜನ್ಮದಿನ. ಈ ವಿಳಾಸಕ್ಕೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಶತಮಾನದಿಂದಲೂ ಬರುತ್ತಿರುವ ಪತ್ರಗಳಿಗೆ ಲೆಕ್ಕವೇ ಇಲ್ಲ. ಆದರೆ ಈಗ ಯಾರಾದರೂ ಪತ್ರ ಬರೆದರೆ, ಷೆರ್ಲಾಕ್ ಅಭಿಮಾನಿಗಳು 'ಹೋಮ್ಸ್ ಈಗ ವೃದ್ಧಾಪ್ಯದಲ್ಲಿರುವ ಕಾರಣ, ಪತ್ತೇದಾರಿಕೆಯಿಂದ ನಿವೃತ್ತರಾಗಿದ್ದಾರೆ, ಯಾವ ಹೊಸ ಕೇಸ್‌ಗಳನ್ನೂ ತೆಗೆದುಕೊಳ್ಳುತ್ತಿಲ್ಲ. ಕ್ಷಮಿಸಿ' ಎಂದು ರಿಪ್ಲೈ ಬರೆಯಬಹುದಷ್ಟೆ!
ಯೌವನದ ದಿನಗಳಲ್ಲಿ ಇದೇ ಷೆರ್ಲಾಕ್ ಅದೆಷ್ಟು ಸಾಹಸಗಳನ್ನು ಮಾಡಿದ್ದಾನೋ ಲೆಕ್ಕವೇ ಇಲ್ಲ. ಸಮಸ್ಯೆ ಹೇಳಿಕೊಂಡು ಒಂದು ಪತ್ರ ಬರೆದಿದ್ದರೂ ಸಾಕು, ಅವರ ಗಮನಕ್ಕೆ ಬರುವ ಮೊದಲೇ ಸಮಸ್ಯೆಯ ಮೂಲವನ್ನು ಕೆದಕಿ ಅದಕ್ಕೆ ಕಾರಣರಾದವರಿಗೆ ಒಂದು ಗತಿ ಕಾಣಿಸಿದ ಮೇಲೆ 'ಹೆದರಬೇಡಿ, ನಿಮ್ಮ ಸಮಸ್ಯೆ ಬಗೆಹರಿದಿದೆ. ಇಂತಿಂಥ ವ್ಯವಸ್ಥೆ ಮಾಡಿದ್ದೇನೆ' ಎನ್ನುವ ಅಭಯವನ್ನು ಕೊಡುವಂಥ ಆಪದ್ಬಾಂಧವ.
ಈಗ ಮನೆ ನಂಬರ್ 221B ಹುಡುಕಿ ಹೋದರೂ ವೃದ್ಧ ಹೋಮ್ಸ್‌ನ ಭೇಟಿಗೆ ಅವಕಾಶ ಸಿಗುವುದಿಲ್ಲ. ಈತ ಬಳಸುತ್ತಿದ್ದ ಉದ್ದನೆಯ ಕೋಟು, ಕಪ್ಪು ಕನ್ನಡಕ, ಸದಾ ಧರಿಸುತ್ತಿದ್ದ ಹ್ಯಾಟ್, ಹೊರಗೆ ಹೋಗುವಾಗ ರಕ್ಷಣೆಗೆ ಬಳಸುತ್ತಿದ್ದ ಬೆತ್ತದ ಕೋಲು, ಪತ್ತೇದಾರಿಕೆ ಕೆಲಸದಲ್ಲಿ ಬಳಸುತ್ತಿದ್ದ ಭೂತಗನ್ನಡಿ… ಇವೆಲ್ಲವನ್ನೂ ಅಲ್ಲಿ ನೋಡಬಹುದು. ಆತನ ಮನೆ ಈಗ ಮ್ಯೂಸಿಯಂ!
ಯಾರು ಈ ಷೆರ್ಲಾಕ್?
ಸರ್ ಆರ್ಥರ್ ಕಾನನ್ ಡಾಯ್ಲ್ ಎಂಬ ಬ್ರಿಟಿಷ್ ಲೇಖಕ ಸೃಷ್ಟಿಸಿರುವ ಕಾಲ್ಪನಿಕ ಪಾತ್ರ ಈ ಷೆರ್ಲಾಕ್ ಹೋಮ್ಸ್. 56 ಸಣ್ಣ ಕತೆಗಳಲ್ಲಿ ಹಾಗೂ ನಾಲ್ಕು ಕಾದಂಬರಿಗಳಲ್ಲಿ ಪತ್ತೇದಾರನಾಗಿ ಷೆರ್ಲಾಕ್ ಕಾಣಿಸಿಕೊಂಡಿದ್ದಾನೆ. ಕನ್ನಡವೂ (ಅನುವಾದ: ವಾಸುದೇವರಾವ್) ಸೇರಿದಂತೆ 84 ಭಾಷೆಗಳಲ್ಲಿ ಈತನ ಎಲ್ಲ ಪುಸ್ತಕಗಳು ಭಾಷಾಂತರಗೊಂಡಿವೆ. ದೊಡ್ಡ ಸಂಖ್ಯೆಯ ಅಭಿಮಾನಿಗಳೂ ಜಗತ್ತಿನಾದ್ಯಂತ ಇದ್ದಾರೆ. ಈ ಅಭಿಮಾನ ಎಷ್ಟರಮಟ್ಟಿಗೆ ಎಂದರೆ, ವಾಸ್ತವದಲ್ಲಿ ಇಲ್ಲದಿದ್ದರೂ ಷೆರ್ಲಾಕ್‌ನನ್ನು ನೋಡುವ ಹಂಬಲ ಈ ಅಭಿಮಾನಿಗಳಿಗೆ…
ಷೆರ್ಲಾಕ್ ಕತೆಗಳಲ್ಲಿ ಬರುವ ಕಾಲ್ಪನಿಕ ಪಾತ್ರದ ವಿಳಾಸ ಲಂಡನ್ ನಗರದ ಬೇಕರ್ ರಸ್ತೆ. ಬೇಕರ್ ಎನ್ನುವ ರಸ್ತೆಯೇನೋ ಇದೆ, ಆದರೆ ಅಲ್ಲಿ 221B ನಂಬರ್‌ನ ಯಾವ ಮನೆಯೂ ಇರಲಿಲ್ಲ. ಓದುಗರು ತಮ್ಮ ಸಮಸ್ಯೆಗಳನ್ನು ಈತ ಬಗೆಹರಿಸಬಲ್ಲ ಎಂದು ನಂಬಿ ಈ ವಿಳಾಸಕ್ಕೆ ಪತ್ರ ಬರೆಯುತ್ತಿದ್ದರು! ಇದರ ಬಗ್ಗೆ ಅರಿವಿದ್ದ ಪೋಸ್ಟ್‌ಮ್ಯಾನ್‌ಗಳು ಈ ಪತ್ರಗಳನ್ನು ಲೇಖಕ ಕಾನನ್‌ಗೆ ತಲುಪಿಸುತ್ತಿದ್ದರು.
1930ರಲ್ಲಿ ಕಾನನ್ ಡಾಯ್ಲ್ ತೀರಿಕೊಂಡ ನಂತರ ಈ ವಿಳಾಸಕ್ಕೆ ಬರುವ ಪತ್ರಗಳನ್ನು ಏನು ಮಾಡುವುದು ಎಂದು ಅಂಚೆ ಇಲಾಖೆಯವರಿಗೆ ತಿಳಿಯದಾಯಿತು. ಆಗ ಅಭಿಮಾನಿಗಳು 'ಹೋಮ್ಸ್ ಅಭಿಮಾನಿ ಸಂಘ' ಹುಟ್ಟುಹಾಕಿದರು. ಕತೆಗಳಲ್ಲಿ ಬರುವ ವಿವರಗಳನ್ನೆಲ್ಲ ಒಳಗೊಂಡ ಮನೆಯನ್ನೇ ಲಂಡನ್‌ನ ಬೇಕರ್ ರಸ್ತೆಯಲ್ಲಿ ಕಟ್ಟಿಸಿದರು. ಅದೇ ಈಗ 'ಷೆರ್ಲಾಕ್ ಹೋಮ್ಸ್ ಮ್ಯೂಸಿಯಂ'. ಕಾಲ್ಪನಿಕ ಪಾತ್ರಕ್ಕೆ ಒಂದು ಮ್ಯೂಸಿಯಂ ಸ್ಥಾಪಿಸಿರುವುದು ಜಗತ್ತಿನಲ್ಲಿ ಏಕೈಕ ಎನ್ನಲಾಗಿದೆ.
ಏನು ಈ ಪುಸ್ತಕಗಳ ವೈಶಿಷ್ಟ್ಯ?
ಷೆರ್ಲಾಕ್ ಹೋಮ್ಸ್ ಪುಸ್ತಕಗಳಲ್ಲಿ ಡಾ. ವಾಟ್ಸನ್ ಎಂಬ ಪಾತ್ರ ಇರುತ್ತದೆ. ವೈದ್ಯನಾಗಿರುವ ಈತ ಷೆರ್ಲಾಕ್‌ನ ಸಹಾಯಕ ಹಾಗೂ ರೂಮ್‌ಮೇಟ್. ಬಿಡುವಿದ್ದಾಗ ಪತ್ತೇದಾರಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದ. ನಮಗೆ ಆತ ಅಷ್ಟೇನೂ ಬುದ್ಧಿವಂತನಲ್ಲದ ಪಾತ್ರವಾಗಿ ಕಾಣಿಸುತ್ತಾನೆ. ಇಲ್ಲಿ ಓದುಗರಿಗೆ ಬರುವ ಸಂದೇಹಗಳೆಲ್ಲವೂ ವಾಟ್ಸನ್‌ಗೆ ಬರುತ್ತಿರುತ್ತದೆ. ಆತ ಷೆರ್ಲಾಕ್‌ಗೆ ಪ್ರಶ್ನೆ ಕೇಳುತ್ತಿರುತ್ತಾನೆ, ಅದಕ್ಕೆ ಷೆರ್ಲಾಕ್ ಉತ್ತರಿಸುತ್ತಾ ಹೋದಂತೆ ಅಲ್ಲಿರುವ ಡಾ. ವಾಟ್ಸನ್ ನಾವಾಗಿಬಿಡುತ್ತೇವೆ. ಷೆರ್ಲಾಕ್ ನಿಜವಾಗಿಯೂ ನಮ್ಮ ಮುಂದೆಯೇ ಕುಳಿತು ನಮ್ಮ ಜತೆ ಸಂಭಾಷಿಸುತ್ತಿರುವಂತೆ ಭಾಸವಾಗುತ್ತದೆ. ಆದ್ದರಿಂದ ಈ ಸನ್ನಿವೇಶದಲ್ಲಿ ನಾವೂ ಭಾಗಿಯಾಗಿಬಿಡುತ್ತೇವೆ.
'ಸತ್ತ' ಷೆರ್ಲಾಕ್‌ನಿಗೆ ಜೀವ ಬಂತು!
ನೌಕಾದಳದಲ್ಲಿ ವೈದ್ಯಾಧಿಕಾರಿಯಾಗಿದ್ದ ಕಾನನ್ ಡಾಯ್ಲ್, ಅನ್ಯ ಕೆಲಸದ ನಿಮಿತ್ತ ಷೆರ್ಲಾಕ್ ಹೋಮ್ಸ್‌ನ ಸರಣಿಯನ್ನು 'ದಿ ಫೈನಲ್ ಪ್ರಾಬ್ಲೆಮ್' ಎಂಬ ಪುಸ್ತಕದ ಮೂಲಕ ನಿಲ್ಲಿಸಿಬಿಟ್ಟರು. ಇದನ್ನು ಅಭಿಮಾನಿಗಳು ಅರಗಿಸಿಕೊಳ್ಳಲಾಗದೇ ಭಾರಿ ಪ್ರತಿಭಟನೆ ಮಾಡಿದರು. ಸತ್ತು ಹೋದ ಷೆರ್ಲಾಕ್‌ಗೆ ಮರುಜೀವ ನೀಡುವಂತೆ ಕಾನನ್ ಅವರಿಗೆ ಒತ್ತಾಯಿಸಿ ದೊಡ್ಡ ಪ್ರಮಾಣದ ಪತ್ರ ಚಳವಳಿಯೇ ನಡೆದುಹೋಯಿತು. ಎಂಟು ವರ್ಷಗಳ ನಿರಂತರ ಒತ್ತಡಕ್ಕೆ ಮಣಿದು ಕಾನನ್ ಅವರು 'ದಿ ರಿಟರ್ನ್ ಆಫ್ ಷೆರ್ಲಾಕ್ ಹೋಮ್ಸ್' ಪುಸ್ತಕದ ಮೂಲಕ ಸರಣಿ ಮುಂದುವರೆಸಿದರು. ಈ ಪುಸ್ತಕ ಇನ್ನೂ ಹೆಚ್ಚಿನ ಹುಚ್ಚೆಬ್ಬಿಸಿತು.
(ಮಾಹಿತಿ ಕೃಪೆ ವಿಜಯವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ