ಬೆಂಗಳೂರು, ಅಕ್ಟೋಬರ್ 13: ರಾಜ್ಯದ ವಿದ್ಯುತ್ ಉತ್ಪಾದನೆ, ಪೂರೈಕೆ ಪರಿಸ್ಥಿತಿ ಹಾಗೂ ರಾಜ್ಯದಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
"ವಿದ್ಯುತ್ ಉತ್ಪಾದನೆ ಹಾಗೂ ಮಳೆಯಿಂದಾದ ಪರಿಣಾಮಗಳ ಕುರಿತು ಸಭೆ ನಡೆಸಿದ್ದೇನೆ. ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವರ ಭೇಟಿ ಬಳಿಕ ಹೆಚ್ಚುವರಿ 2 ರೇಕ್ ಕಲ್ಲಿದ್ದಲು ಬರುತ್ತಿದೆ. ಇನ್ನೂ ಎರಡು ರೇಕ್ ಕಲ್ಲಿದ್ದಲು ಕೊಡುವುದಾಗಿ ಹೇಳಿದ್ದಾರೆ. ನಾವು ಹಣ ಪಾವತಿಸಿದ ತಕ್ಷಣ ಪೂರೈಕೆ ಪ್ರಕ್ರಿಯೆ ನಡೆಯುತ್ತದೆ. ರಾಜ್ಯದಲ್ಲಿ ವಿದ್ಯುತ್ ಸ್ಥಗಿತ ಆಗದಂತೆ ನೋಡಿಕೊಳ್ಳುತ್ತೇವೆ," ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
"ರಾಜ್ಯದಲ್ಲಿ ಪ್ರಸ್ತುತ 98,863 ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನು ಇದೆ. ತೆಲಂಗಾಣದ ಸಿಂಗರೇಣಿಯಿಂದ ಕಲ್ಲಿದ್ದಲು ತರಿಸುವ ಬಗ್ಗೆ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು."
"ರಾಜ್ಯದಲ್ಲಿ ಯಾವುದೇ ರೀತಿಯ ಪವರ್ ಕಟ್ ಇಲ್ಲ. ಮುಂದೆಯೂ ರಾಜ್ಯದಲ್ಲಿ ಪವರ್ ಕಟ್ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಜೊತೆಗೂ ಮಾತಾಡುತ್ತಿದ್ದೇನೆ. 10-12 ರೇಕ್ ಕಲ್ಲಿದ್ದಲು ನೀಡುವ ಕುರಿತು ಚರ್ಚಿಸಲಾಗುತ್ತಿದೆ. ಎಸ್ಕಾಂ ಆರ್ಥಿಕ ಸಫಲತೆ ಕಾಣಬೇಕು," ಎಂದು ಅವರು ಹೇಳಿದ್ದಾರೆ.
"ಸಿದ್ದರಾಮಯ್ಯ ಖಾಸಗೀಕರಣದ ಭ್ರಮೆಯಲ್ಲೇ ಇರ್ತಾರೆ. ಸರ್ಕಾರ ಫೇಲ್ ಆಗಿಲ್ಲ, ಕಲ್ಲಿದ್ದಲು ಕೊರತೆ ಆಗುವುದಕ್ಕೆ ಬಿಡಲ್ಲ. ಈ ಬಾರಿ ಮಳೆ ಹೆಚ್ಚು ಆಗಿದ್ದರಿಂದ ಕಲ್ಲಿದ್ದಲು ಸಮಸ್ಯೆ ಉಂಟಾಗಿದೆ. ಒಡಿಶಾದಲ್ಲಿ ಮಳೆ ಹೆಚ್ಚಾಗಿದ್ದರಿಂದ ಕಲ್ಲಿದ್ದಲು ಸಮಸ್ಯೆ ಉಂಟಾಗಿದೆ. ಒಡಿಶಾದಿಂದ ಕಲ್ಲಿದ್ದಲು ಬರಲು ನಿಧಾನವಾಗುತ್ತಿದೆ. ಸಿದ್ದರಾಮಯ್ಯರ ಆರೋಪ ಆಧಾರ ರಹಿತವಾದದ್ದು," ಎಂದು ಕೃತಕ ಅಭಾವ ಸೃಷ್ಟಿಸಿ ಖಾಸಗೀಕರಣ ಮಾಡಬಾರದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿದರು.
"ಎಸ್ಕಾಂಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಿಂದೆ ಸರ್ಕಾರ ಕೊಟ್ಟಿರುವ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸುವ ಪ್ರಸ್ತಾವನೆ ನಮ್ಮ ಮುಂದಿದ್ದು, ಅದರ ಬಗ್ಗೆಯೂ ಕ್ರಮ ಜರುಗಿಸಲಾಗುವುದು. ಎಸ್ಕಾಂ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಆದಾಯ ಸಂಗ್ರಹಕ್ಕೆ ಆದ್ಯತೆ ನೀಡಿ, ಬಂಡವಾಳ ಹೂಡಿಕೆ ಪ್ರತ್ಯೇಕವಾಗಿ ಮಾಡಬೇಕು. ಹಣ ಪಾವತಿ ಬಾಕಿ ಉಳಿಸಿಕೊಳ್ಳಬಾರದು," ಎಂದು ಸೂಚಿಸಿರುವುದಾಗಿ ತಿಳಿಸಿದರು.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ