ವಾರಾಣಸಿ, ಉತ್ತರ ಪ್ರದೇಶ: ಕೆಲ ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಕಾಶಿ ವಿಶ್ವನಾಥ ಸ್ವಾಮಿ (Kashi Vishwanatha Swamy) ದೇಗುಲದ (Temple) ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮಾಡಿದ್ದರು. ಅದಾದ ಬಳಿಕ ಕಾಶಿ ವಿಶ್ವನಾಥನ ಸನ್ನಿಧಿಗೆ ಬರುವ ಭಕ್ತರು (Devotees), ಪ್ರವಾಸಿಗರ (Tourists) ಸಂಖ್ಯೆಯೂ ಜಾಸ್ತಿಯಾಗಿತ್ತು.
ಇತ್ತೀಚೆಗೆ ನವೀಕರಣಗೊಂಡಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ ಅನಾಮಧೇಯ ವ್ಯಕ್ತಿಯೊಬ್ಬರು 60 ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದು, ಈ ಪೈಕಿ 37 ಕೆ.ಜಿ. ಚಿನ್ನವನ್ನು ಗರ್ಭಗಡಿಯ ಒಳಗೋಡೆಗಳಿಗೆ ಲೇಪನ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.
ದೇಗುಲ ಆಡಳಿತ ಮಂಡಳಿಯಿಂದ ಫೋಟೋ ರಿಲೀಸ್
ಗೋಡೆಗಳ ಮೇಲೆ ಹೊಳೆಯುವ ಚಿನ್ನದ ಲೇಪನವನ್ನು ಪ್ರಧಾನಿ ಮೋದಿ ಅವರು ಕಳೆದ ಭಾನುವಾರ ಪ್ರಚಾರದ ವೇಳೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಖುದ್ದು ನೋಡಿದರು. ಈ ಚಿತ್ರಗಳನ್ನು ಕಾಶಿ ವಿಶ್ವನಾಥ ದೇಗುಲದ ಆಡಳಿತ ಮಂಡಳಿ ಬಿಡುಗಡೆ ಮಾಡಿದೆ.
ದಕ್ಷಿಣ ಭಾರತದ ಅನಾಮಧೇಯ ಉದ್ಯಮಿಯಿಂದ ದಾನ
ಬರೋಬ್ಬರಿ 60 ಕೆಜಿ ತೂಕದ ಚಿನ್ನವನ್ನು ಕಾಶಿ ವಿಶ್ವನಾಥ ದೇವಾಲಯಕ್ಕೆ ದಕ್ಷಿಣ ಭಾರತದ ಅನಾಮಧೇಯ ಉದ್ಯಮಿಯೊಬ್ಬರು ದಾನವಾಗಿ ನೀಡಿದ್ದಾರೆ ಎನ್ನಲಾಗಿದೆ. 60 ಕೆ.ಜಿ. ಚಿನ್ನದ ಪೈಕಿ 37 ಕೆಜಿ ಚಿನ್ನವನ್ನು ಗರ್ಭಗುಡಿ ಒಳಗೋಡೆಗೆ ಲೇಪನ ಮಾಡಲು ಬಳಸಲಾಗಿದೆ. ಉಳಿದ 23 ಕೆ.ಜಿ. ಚಿನ್ನವನ್ನು ಕಾಶಿ ವಿಶ್ವನಾಥ ದೇವಾಲಯದ ಗುಮ್ಮಟದ ಕೆಳಭಾಗವನ್ನು ಅಲಂಕರಿಸಲು ಬಳಸಲಾಗುವುದು ಅಂತ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
37 ಕೆಜಿ ಚಿನ್ನವನ್ನಷ್ಟೇ ಬಳಸಿದ್ದು ಯಾಕೆ?
37 ಕೆ.ಜಿಯನ್ನೇ ಬಳಸಿದ್ದರ ಹಿಂದೆ ವಿಶೇಷ ಉದ್ದೇಶವಿದೆ. ಇದು ಇತ್ತೀಚೆಗೆ 100 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ರ ಈಗಿನ ತೂಕ. ಹೀಗಾಗಿ ಅವರ ಗೌರವಾರ್ಥ 37 ಕೆಜಿ ತೂಕದ ಚಿನ್ನವನ್ನಷ್ಟೇ ಬಳಸಿ ಕಾಶಿ ವಿಶ್ವನಾಥನ ಗರ್ಭಗುಡಿಯ ಒಳಗೋಡೆ ಅಲಂಕರಿಸಲಾಗಿದೆ.
ಈ ಹಿಂದೆಯೇ ದೇಗುಲಕ್ಕೆ ಚಿನ್ನದ ಲೇಪನ
18ನೇ ಶತಮಾನದ ಬಳಿಕ ಮೊದಲ ಬಾರಿಗೆ ದೇವಾಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ಲೇಪನ ಮಾಡಲಾಗಿತ್ತು. 1777ರಲ್ಲಿ ಇಂದೋರಿನ ಮಹಾರಾಣಿ ಅಹಲ್ಯಾ ಬಾಯಿ ಹೋಳ್ಕರ್ ಹಾಗೂ ಪಂಜಾಬಿನ ಮಹಾರಾಜ ರಣಜೀತ್ ಸಿಂಗ್ ಕಾಶಿ ವಿಶ್ವನಾಥ ದೇವಾಲಯದ ಗುಮ್ಮಟ ನಿರ್ಮಾಣಕ್ಕೆ 1 ಟನ್ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದರು.
2017ರಿಂದಲೂ ಅಭಿವೃದ್ಧಿ ಕಾರ್ಯ
2017ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇವಾಲಯದ ಜೀರ್ಣೋದ್ಧಾರ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 900 ಕೋಟಿ ರು. ವೆಚ್ಚದಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಸುತ್ತ ಮುತ್ತಲಿನ ಸುಮಾರು 300 ಕಟ್ಟಡಗಳನ್ನು ಖರೀದಿಸಿ ದೇವಾಸ್ಥಾನದ ಪ್ರಾಕಾರವನ್ನು 2700 ಚದರ ಅಡಿಯಿಂದ 5 ಲಕ್ಷ ಚದರ ಅಡಿಗೆ ಹೆಚ್ಚಿಸಲಾಗಿದೆ.
ಮಾಹಿತಿ ಕೃಪೆ kannada/news18kannada-epaper
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ