ಬೆಂಗಳೂರು: ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ (72) ಅವರು ತಡರಾತ್ರಿ 2 ಗಂಟೆ ಸಮಯದಲ್ಲಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸತ್ಯಜಿತ್ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿ ಕಳೆದ ಸೋಮವಾರ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದಾರೆ.
ಆಸ್ಪತ್ರೆಗೆ ಸತ್ಯಜಿತ್ ದಾಖಲಿಸಿದ ದಿನ ಮಾಧ್ಯಮದವರ ಜತೆ ಮಾತನಾಡಿದ್ದ ಪುತ್ರ ಆಕಾಶ್, ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಲೇ ಇದೆ. ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದರು. ಇನ್ನು ಮೂಲಗಳ ಪ್ರಕಾರ, ಹಲವು ದಿನಗಳಿಂದ ಆರೋಗ್ಯ ಕೈಕೊಟ್ಟಿದ್ದರಿಂದ ಸತ್ಯಜಿತ್ ಕುಟುಂಬಕ್ಕೆ ಆರ್ಥಿಕ ಸಂಕಷ್ಟವೂ ಎದುರಾಗಿತ್ತು ಎಂದು ತಿಳಿದುಬಂದಿದೆ.
ಗ್ಯಾಂಗ್ರಿನ್ನಿಂದಾಗಿ ಅವರ ಒಂದು ಕಾಲು ಕತ್ತರಿಸಲಾಗಿತ್ತು. ಬಳಿಕ ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಕಾಲಿನಲ್ಲಿ ಗ್ಯಾಂಗ್ರಿನ್ ಕಾಣಿಸಿಕೊಂಡ ಬಳಿಕ ಸಿನಿಮಾ ರಂಗದಿಂದ ಅವರಿಗೆ ಬೇಡಿಕೆ ಕಡಿಮೆ ಆಯಿತು. ಬಳಿಕ ಕುಟುಂಬದ ಹಣಕಾಸಿನ ಸ್ಥಿತಿಯು ಉತ್ತಮವಾಗಿರಲಿಲ್ಲ. ಅಲ್ಲದೆ, ಮಗಳ ಮೇಲೆಯೂ ಸತ್ಯಜಿತ್ ಅಸಮಾಧಾನವಾಗಿತ್ತು. ಕುಟುಂಬ ಮತ್ತು ಆರೋಗ್ಯ ಸಮಸ್ಯೆಗಳಿಂದ ಸತ್ಯಜಿತ್ ತುಂಬಾ ಕೊರಗಿ ಹೋಗಿದ್ದರು.
ಇನ್ನು 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಸತ್ಯಜಿತ್ ಅಭಿನಯಿಸಿದ್ದರು. ಈ ಸಿನಿಮಾ ಬಳಿಕ ಯಾವುದೇ ಸಿನಿಮಾಗಳಲ್ಲೂ ಅಭಿನಯಿಸಿಲ್ಲ. ಕನ್ನಡದಲ್ಲಿ ಸುಮಾರು 600 ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದ್ದಾರೆ. ವಿಲನ್ ಮತ್ತು ಪೋಷಕ ಪಾತ್ರ ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ಕಾಮಿಡಿ ಟೈಮಿಂಗ್ ಜನರನ್ನು ನಗಿಸಿದ್ದಾರೆ.
ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್ ಸೇರಿದಂತೆ ಸಾಕಷ್ಟು ಕಲಾವಿದರ ಸಿನಿಮಾಗಳಲ್ಲಿ ಸತ್ಯಜಿತ್ ಖಳನಟ ಹಾಗು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
(ಮಾಹಿತಿ ಕೃಪೆ ವಿಜಯವಾಣಿ)











