ಬೆಂಗಳೂರು:ಮೇ 4 ರ ಬಳಿಕ ಕೋವಿಡ್ ಕಂಟೇನ್ಮೆಂಟ್ ಬಿಟ್ಟು, ಬೆಂಗಳೂರು ನಗರವೂ ಸೇರಿ ರಾಜ್ಯದ ಎಲ್ಲ ಕಡೆಗಳಲ್ಲಿ ಕೈಗಾರಿಕೆ ಚಟುವಟಿಕೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಅವರು ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಮುಂದಿನ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಕೊರೊನಾ ಸಮಸ್ಯೆ ಇರುತ್ತದೆ. ಅದರ ಜತೆಗೇ ಬದುಕು ಸಾಗಿಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದರು.ತ
ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡ ಕಠಿಣ ಕ್ರಮಗಳು, ಚಿಕಿತ್ಸಾ ಕ್ರಮ, ಸರ್ಕಾರ ಕಲ್ಪಿಸಿದ ಸೌಲಭ್ಯ ಮತ್ತು ಮಾಧ್ಯಮಗಳು ನಡೆಸಿದ ಜಾಗೃತಿ ಆಂದೋಲನದಿಂದಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲೆಡೆ ಕಳೆದ 3- 4 ದಿನಗಳಿಂದ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ.ಇದೇ ಸ್ಥಿತಿ ಮುಂದುವರಿದರೆ ಬೆಂಗಳೂರು ನಗರದ ಸುತ್ತುಮುತ್ತ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆ ಆರಂಭಿಸಲು ಅನುಕೂಲವಾಗುತ್ತದೆ. ಇನ್ನು ಎರಡು ಮೂರು ದಿನ ಕಾದು ನೋಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
ಕೈಗಾರಿಕೆಗಳನ್ನು ಆರಂಭಿಸಲು ಏನೆಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಕೈಗಾರಿಕೋದ್ಯಮಿಗಳ ಜತೆ ಚರ್ಚೆ ನಡೆಸಲಿದ್ದೇವೆ ಎಂದರು.
ಒಂದು ವೇಳೇ ಕೊರೊನಾ ಸಮಸ್ಯೆ 2-3 ತಿಂಗಳು ಮುಂದುವರಿದರೆ, ಕೆಂಪು ವಲಯದಲ್ಲು ಕಠಿಣ ನಿರ್ಬಂಧ ವಿಧಿಸಿ, ಮತ್ತೊಂದು ಕಡೆ ಆರ್ಥಿಕ ಚಟುವಟಿಕೆ ಮುಂದುವರಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ, ಕೊರೊನಾ ಸಮಸ್ಯೆ ಜತೆಗೆ ಹೋರಾಡುತ್ತಲೇ, ಆರ್ಥಿಕ ಚಟುವಟಿಕೆ ಪುನಶ್ಚೇತನ ಮಾಡಬೇಕು. ಎರಡೂ ಒಟ್ಟಿಗೆ ನಡೆಯಬೇಕು ಎಂದು ಅವರು ಹೇಳಿದರು.
ಅಂತರ್ ಜಿಲ್ಲೆ- ಅಂತರ್ ರಾಜ್ಯ ಸಂಚಾರ:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಿಂದ ಸಿಕ್ಕಿಕೊಂಡವರು ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯಗಳಿಗೆ ಹೋಗಲು ಅಥವಾ ಬರಲು ಒಂದು ಬಾರಿ ಅವಕಾಶ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಇತರರಿಗೆ ಅನುಕೂಲವಾಗಲಿದೆ. ಈ ಸಂಬಂಧ ಮುಖ್ಯಕಾರ್ಯದರ್ಶಿಯವರು ಮಾರ್ಗಸೂಚಿ ಹೊರಡಿಸುವರು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹೊರ ರಾಜ್ಯಗಳಿಂದ ಬರುವವರು ಇದ್ದರೆ ಅವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿ, ನೆಗೆಟಿವ್ ಬಂದರೆ ಮಾತ್ರ ಬರಲು ಅವಕಾಶ ನೀಡಲಾಗುತ್ತದೆ. ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಲಾಗುತ್ತದೆ ಎಂದು ಹೇಳಿದರು.
ಈ ರೀತಿ ತಮ್ಮ ಊರುಗಳಿಗೆ ಹೋಗುವವರು ತಮ್ಮದೇ ಖರ್ಚಿನಲ್ಲಿ ಹೋಗಬೇಕು. ಸರ್ಕಾರ ಖರ್ಚು ವೆಚ್ಚ ಭರಿಸುವುದಿಲ್ಲ. ಒಂದು ಗುಂಪು ಸೇರಿ ಬಸ್ಸಿನಲ್ಲಿ ಹೋಗಲು ಬಯಸಿದರೆ ಅವರಿಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಅದರ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ. ಪ್ರಯಾಣಕ್ಕೆ ಅನುಮತಿಯನ್ನು ಸರ್ಕಾರ ನೀಡುತ್ತದೆ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಕೆಂಪು ವಲಯ ಬಿಟ್ಟು ಬೇರೆ ಕಡೆಗಳಲ್ಲಿ ಕೈಗಾರಿಕಾ ಚಟುವಟಿಕೆ ನಡೆಸಲು ಅವಕಾಶ ನೀಡಲಾಗುವುದು. ಈ ಸಂಬಂಧ ಕೆಲವರು ಅಂತರ್ ಜಿಲ್ಲೆಗಳ ಮಧ್ಯೆ ಓಡಾಡಬೇಕಾಗುತ್ತದೆ. ಅಂತಹವರಿಗೆ ಪಾಸ್ ನೀಡಲು ಕೈಗಾರಿಕಾ ಆಡಳಿತ ಮಂಡಳಿಗಳು ಜಿಲ್ಲಾಡಳಿತಗಳಿಗೆ ಮನವಿ ಮಾಡಬಹುದು ಎಂದರು.
* ಮೇ 3 ರವರೆಗೆ ಮದ್ಯದಂಗಡಿಗಳು, ಸಲೂನ್‌ಗಳು ಮತ್ತು ರೆಸ್ಟೊರೆಂಟ್‌ಗಳು ತೆರೆಯುವಂತಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕ್ರಮ
* ಮೇ 3 ರ ಬಳಿಕ ಬಹುತೇಕ ಎಲ್ಲ ವಾಣಿಜ್ಯ ಚಟುವಟಿಕೆಗಳಿಗೆ ಪ್ರಧಾನಿಯವರು ಅನುಮತಿ ನೀಡುವ ಸಾಧ್ಯತೆ ಇದೆ.
ಸಚಿವ ಸಂಪುಟದ ಇತರ ತೀರ್ಮಾನಗಳು:
* ಹೊಸ ಮರಳು ನೀತಿಗೆ ಒಪ್ಪಿಗೆ. ಇದರ ಅನ್ವಯ ನದಿ ಪಾತ್ರಗಳಲ್ಲಿ, ಪಟ್ಟಾ ಭೂಮಿಯಲ್ಲಿ, ಕೆರೆ, ಗ್ರಾಮೀಣ ಪ್ರದೇಶದ ಹಳ್ಳಕೊಳ್ಳಗಳಲ್ಲಿ ಮರಳು ಬ್ಲಾಕ್ ಗುರುತಿಸಲಾಗುತ್ತದೆ. ಅಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಾಗುವುದು.
*ಮರಳು ಮೆಟ್ರಿಕ್ ಟನ್‌ಗೆ ₹ 700 ರಂತೆ ನಿಗದಿ ಮಾಡಲಾಗುವುದು. ಈ ಮರಳನ್ನು ಜನತಾ ಮನೆ, ಸಣ್ಣಪುಟ್ಟ ನಿರ್ಮಾಣ ಕಾರ್ಯಗಳಿಗೆ ಬಳಸಬಹುದು. ಜಿಲ್ಲಾ ದಂಡಾಧಿಕಾರಿಗಳು ಮತ್ತು ಎಇಇಗಳ ಸಮನ್ವಯದ ಮೂಲಕ ಕಾರ್ಯ ನಿರ್ವಹಿಸಬೇಕು. ಇದರಿಂದ ಮರಳು ದಂಧೆಗೆ ಕಡಿವಾಣ ಬೀಳಲಿದೆ. ಬೇಕಾಬಿಟ್ಟಿ ಮಾರಾಟಕ್ಕೆ ಮತ್ತು ದರ ನಿಗದಿ ಮಾಡಲು ಅವಕಾಶವಿಲ್ಲ.
*ಇದರಿಂದ ಸರ್ಕಾರಕ್ಕೆ ಸುಮಾರು ₹200 ಕೋಟಿ ರಾಜಸ್ವ ನಿರೀಕ್ಷಿಸಲಾಗಿದೆ. ಹಿಂದೆ ₹130 ಕೋಟಿ ಸಿಗುತ್ತಿತ್ತು.
* ನಾಗರಿಕಾ ಸೇವಾ ವರ್ಗೀಕರಣದಡಿ ಶಿಸ್ತುಕ್ರಮಕ್ಕೊಳಗಾದ ನೌಕರರಿಗೆ ಶಿಕ್ಷೆ ಪ್ರಮಾಣ ನಿಗದಿ.
* ಶಿಕ್ಷಣ ಇಲಾಖೆಯಲ್ಲಿ ಸಂಬಳ ಬಿಡುಗಡೆ ಸಂಬಂಧ ಲೆಕ್ಕ ಶೀರ್ಷಿಕೆಯನ್ನು ಬದಲಿಸಬೇಕಾದ ಪ್ರಮೇಯ ಒದಗಿದ್ದರಿಂದ ನಾಲ್ವರು ಅಧಿಕಾರಿಗಳ ಮೇಲೆ ಆರೋಪ ಹೊರಿಸಿ ಲೋಕಾಯುಕ್ತ ತನಿಖೆ ನಡೆಸಲಾಗಿತ್ತು. ಸರ್ಕಾರದ ಹಿತದೃಷ್ಟಿಯಿಂದಾಗಿ ಅವರು ಈ ಕ್ರಮ ಕೈಗೊಂಡಿದ್ದರಿಂದ ನಾಲ್ಕು ಅಧಿಕಾರಿಗಳ ಮೇಲೆ ಕ್ರಮ ಕೈಬಿಡಲು ತೀರ್ಮಾನ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ