
ನವದೆಹಲಿ/ಮುಂಬೈ, ಅ.21-ಭಾರತದಲ್ಲಿ ಕೊರೊನಾ ವೈರಸ್‍ನ ಹಾವಳಿಯ ಏರಿಳಿತ ಮುಂದುವರಿದಿದ್ದರೂ, ಹೆಮ್ಮಾರಿಯ ಆರ್ಭಟ ಗರಿಷ್ಠಕ್ಕೇರಿ ಇಳಿಮುಖವಾಗುತ್ತಿರುವ ಸ್ಪಷ್ಟ ಸೂಚನೆಗಳು ಕಂಡುಬರುತ್ತಿವೆ. ನಿನ್ನೆ ಮತ್ತೆ ಹೊಸ ಪ್ರಕರಣಗಳಲ್ಲಿ ತುಸು ಏರಿಕೆ ಕಂಡುಬಂದಿದ್ದರೂ, ಸತತ ಮೂರನೇ ದಿನ 60,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಕೇಸ್‍ಗಳು ವರದಿಯಾಗಿವೆ. ಅಲ್ಲದೆ, ಸತತ ಐದನೆ ದಿನವೂ ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಇಳಿಮುಖದತ್ತ ಸಾಗಿದೆ. ಇದೇ ವೇಳೆ ಸಾವಿನ ಪ್ರಮಾಣ ಕೊಂಚ ಏರಿಕೆ ಗೋಚರಿಸಿದೆ.
24 ತಾಸುಗಳ ಅವಧಿಯಲ್ಲಿ 54,044 ಮಂದಿಗೆ ಹೊಸದಾಗಿ ರೋಗ ಕಾಣಿಸಿಕೊಂಡಿದೆ. ಮೊನ್ನೆ 46,760 ಹೊಸ ಕೇಸ್‍ಗಳು ದಾಖಲಾಗಿತ್ತು. ಮೂರು ತಿಂಗಳ ಬಳಿಕ ಇಷ್ಟು ಪ್ರಮಾಣದಲ್ಲಿ ಹೊಸ ಪ್ರಕರಣಗಳು ತಗ್ಗಿರುವುದು ಇದೇ ಮೊದಲು. ಭಾನುವಾರ 55,722ರಷ್ಟು ಕೇಸ್ ವರದಿಯಾಗಿತ್ತು. ದಿನನಿತ್ಯದ ಪಾಸಿಟಿವ್ ಕೇಸ್‍ಗಳಲ್ಲಿ ಸತತ ಮೂರನೆ ದಿನ 60,000ಕ್ಕಿಂತ ಕಡಿಮೆ ವರದಿಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇದೇ ವೇಳೆ ದಿನನಿತ್ಯದ ಸಾವು ಪ್ರಕರಣಗಳಲ್ಲೂ ಅಲ್ಪ ಏರಿಕೆ ಕಂಡುಬಂದಿದ್ದು, 24 ತಾಸುಗಳ ಅವಧಿಯಲ್ಲಿ 717 ಮಂದಿ ಸೋಂಕು ರೋಗಕ್ಕೆ ಬಲಿಯಾಗಿದ್ದಾರೆ. ಮೊನ್ನೆ 587 ರೋಗಿಗಳನ್ನು ಹೆಮ್ಮಾರಿ ಆಪೋಶನ ತೆಗೆದುಕೊಂಡಿತ್ತು. ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 76.51 ಲಕ್ಷ ಮತ್ತು ಮೃತರ ಸಂಖ್ಯೆ 1.16 ಲಕ್ಷ ದಾಟಿರುವುದು ಜನರಲ್ಲಿ ಭಯಾಂತಕ ಮುಂದುವರಿಯುವಂತೆ ಮಾಡಿದೆ.
ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ 67.95 ಲಕ್ಷ ದಾಟಿದೆ. ಚೇತರಿಕೆ ಪ್ರಮಾಣ ಶೇ.88.810ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.51ರಷ್ಟು ತಗ್ಗಿದ್ದು, ಜನರಲ್ಲಿ ನಿರಾಳತೆ ಮೂಡಿದೆ. ದೇಶದಲ್ಲಿ ಮೃತರ ಸಂಖ್ಯೆ 1,15,924 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ 76,51,107ರಷ್ಟಿದ್ದು, ನಾಳೆ ವೇಳೆಗೆ 77 ಲಕ್ಷ ದಾಟಲಿದೆ.
ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ. ಅ.11ರಂದು 70 ಲಕ್ಷ ತಲುಪಿದೆ. ಇನ್ನೆರಡು ದಿನಗಳಲ್ಲಿ 80 ಸಾವಿರ ತಲುಪುವ ಆತಂಕವೂ ಇದೆ. 45 ದಿನಗಳ ಬಳಿ ಕಳೆದ ನಾಲ್ಕು ದಿನಗಳಿಂದ 8 ಲಕ್ಷಕ್ಕಿಂತ ಕಡಿಮೆ ಇಳಿದಿದ್ದು, ನಿನ್ನೆ 7,40,090 ಸಕ್ರಿಯ ಪ್ರಕರಣಗಳು ವರದಿಯಾಗಿವೆ.
ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ ಈ ಮಧ್ಯೆ ಐಸಿಎಂಆರ್ ದೇಶಾದ್ಯಂತ ನಿನ್ನೆ 10.83 ಲಕ್ಷ ಮಂದಿಗೆ ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಿದ್ದು, ಈವರೆಗೆ 9.72 ಜನರನ್ನು ಕೋವಿಡ್-19 ಸ್ಯಾಂಪಲ್ ಟೆಸ್ಟ್‍ಗೆ ಒಳಪಡಿಸಲಾಗಿದೆ.
(ಮಾಹಿತಿ ಕೃಪೆ ಈ ಸಂಜೆ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ