ಬೆಂಗಳೂರು: ಕಳೆದ 55 ದಿನಗಳಿಂದ ಜಾರಿಯಲ್ಲಿದ್ದ ಲಾಕ್'ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಲಾಲ್'ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವು ಉದ್ಯಾನವನಗಳಿಗೆ ಮಂಗಳವಾರ ಸಾವಿರಾರು ವಾಯುವಿಹಾರಿಗಳು ಲಗ್ಗೆಯಿಟ್ಟಿದ್ದು, ಈಗಾಗಲೇ ಕೊರೋನಾ ಸೋಂಕಿ ಹರಡದಂತೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿರುವ ಅಧಿಕಾರಿಗಳಿಗೆ ಹೊಸ ತಲೆನೋವು ಶುರುವಾದಂತಾಗಿದೆ.
ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಎಲ್ಲಾ ಉದ್ಯಾನವನಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಸರ್ಕಾರ ಅವಕಾಶ ಕಲ್ಪಿಸಿಕೊಡಲಾಗಿದೆ.
ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿರುವ ಲಾಲ್'ಬಾಗ್ ಮತ್ತು ಕಬ್ಬನ್ ಪಾರ್ಕ್ ಗಳಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಉದ್ಯಾನವನಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕಂಡು ಬಂದಿತ್ತು. ಲಾಲ್ಬಾಗ್ ನಲ್ಲಿ ಆಟೋರಿಕ್ಷಾಗಳಿಗೆ ಲೌಡ್ಸ್ಪೀಕರ್ ಗಳನ್ನು ಅಳವಡಿಸಿ 9 ಗಂಟೆಗಳ ಬಳಿಕ ಉದ್ಯಾನವನ ತೊರೆಯುವಂತೆ ವಾಯುವಿಹಾರಿಗಳಿಗೆ ತಿಳಿಸಲಾಗುತ್ತಿತ್ತು. ಇದೇ ರೀತಿಯ ಕಬ್ಬನ್ ಪಾರ್ಕ್ ನಲ್ಲಿಯೂ ಮಾಡಲಾಗಿತ್ತು.
ತೋಟಗಾರಿಕ ಇಲಾಖೆ ವತಿಯಿಂದ ಎಲ್ಲಾ ನಾಗರಿಕರಿಗೂ ಥರ್ಮಲ್ ಸ್ಕ್ರೀನ್ ಪರೀಕ್ಷೆ ನಡೆಸಿ ಒಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಲ್ಲದೆ, ಸ್ಯಾನಿಟೈಸರ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚನೆಗಳನ್ನು ನೀಡಲಾಗುತ್ತಿತ್ತು. ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವಂತೆ ಮನವರಿಕೆ ಮಾಡಲಾಗುತ್ತಿತ್ತು.
ವಾಯು ವಿಹಾರ ಮಾಡವುದಕ್ಕೆ ಸಾಧ್ಯವಾಗದ ಹಿರಿಯರು ಉದ್ಯಾನದಲ್ಲಿ ನಿಧಾರವಾಗಿ ಒಂದು ಸುತ್ತು ಹಾಸಿ ಪರಿಸರವನ್ನು ಆನಂದಿಸಿ ಮನೆಗೆ ವಾಪಸ್ ಆಗುತ್ತಿರುವುದು ಕಂಡು ಬಂದಿತ್ತು.
ಇನ್ನು ಕಬ್ಬನ್ ಪಾರ್ಕ್ ನಲ್ಲಿಯೂ ಇದೇ ರೀತಿಯ ಬೆಳವಣಿಗೆಗಳೇ ಕಂಡು ಬಂದಿತ್ತು. ಉದ್ಯಾನವನಕ್ಕೆ ಸುಮಾರು 4 ಸಾವಿರ ವಾಯುವಿಹಾರಿಗಳು ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತ್ತು. ಸಾಲಿನಲ್ಲಿ ಕೆಲವರು ಮಾಸ್ಕ್ ಧರಿಸದೇ ಇರುವುದೂ ಕೂಡ ಕಂಡಿತ್ತು. ಈ ವೇಳೆ ಅಧಿಕಾರಿಗಳು ಅವರನ್ನು ಹಿಂದಕ್ಕೆ ಕಳುಹಿಸಿದ್ದರು.
ಈ ನಡುವೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿರುವ ಅಧಿಕಾರಿಗಳು ಸಂಜೆ ಸಮಯವನ್ನು 5-7ರ ಬದಲಿಗೆ 4.30-6.30ಕ್ಕೆ ಬದಲಿಸುವಂತೆ ತಿಳಿಸಿದ್ದಾರೆ.
ಸಂಜೆ ಸಮಯದಲ್ಲಿ ಜನರನ್ನು ನಿಯಂತ್ರಿಸುವುದು ಅತ್ಯಂತ ಕಠಿಣವಾಗಿರುತ್ತದೆ. ಲಾಲ್ ಬಾಗ್ ನಲ್ಲಿ ಪರಿಸ್ಥಿತಿ ನಿಭಾಯಿಸಬಹುದು. ಆದರೆ, ಕಬ್ಬನ್ ಪಾರ್ಕ್ ನಲ್ಲಿ 7 ಮುಖ್ಯದ್ವಾರಗಳಿರುವ ಪರಿಣಾಮ ಅತ್ಯಂತ ಕಠಿಣವಾಗಿರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
(ಮಾಹಿತಿ ಕೃಪೆ ಕನ್ನಡಪ್ರಭ...)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ