
ನಿನ್ನೆ
ಒಂದೇ ದಿನ ಬೆಂಗಳೂರಿನಲ್ಲಿ 1,172 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಭಯ,
ಆತಂಕಗಳಿಂದ ಉತ್ತರ ಕರ್ನಾಟಕಕ್ಕೆ ಹೋಗುವ ಮಂದಿ ಹೆಚ್ಚಾಗಿದ್ದು ಕಳೆದ ಕೆಲ ದಿನಗಳಿಂದ
ಬಸ್ಸುಗಳಲ್ಲಿ ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಹೋಗುವ ಪ್ರಯಾಣಿಕರ ಸಂಖ್ಯೆ
ಹೆಚ್ಚಾಗಿದೆ.
ಬೆಂಗಳೂರಿನ ಕಮಲಾ ನಗರದಲ್ಲಿ ವಾಸವಿದ್ದ ಸಾಫ್ಟ್ ವೇರ್
ಎಂಜಿನಿಯರ್ ಸಿದ್ದರಾಮಪ್ಪ ನವಲಗುಂದ, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ
ಪ್ರಕರಣ ಹೆಚ್ಚಾಗುತ್ತಿದೆ. ಇದರಿಂದ ಎಲ್ಲೆಡೆ ಭಯ ಹೆಚ್ಚಾಗುತ್ತಿದೆ. ಹೀಗಾಗಿ ನಾವು
ಮನೆಗೆ ಬೀಗ ಹಾಕಿ ನಮ್ಮೂರು ಗದಗಕ್ಕೆ ಹೋಗುತ್ತಿದ್ದೇವೆ, ಪರಿಸ್ಥಿತಿ ಸಹಜ ಸ್ಥಿತಿಗೆ
ಬರುವವರೆಗೆ ಅಲ್ಲಿಯೇ ಇರುತ್ತೇವೆ ಎಂದರು.ಕಳೆದ ಎರಡು ದಶಕಗಳಿಂದ ಇವರು ಬೆಂಗಳೂರಿನಲ್ಲಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಕೇಸು ಹೆಚ್ಚಾಗುತ್ತಿರುವುದರಿಂದ ನಾನು ಕೆಲಸ ಮಾಡುವ ಕಂಪೆನಿಯಲ್ಲಿ ಮುಂದಿನ ಎರಡು ತಿಂಗಳು ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಂದೆ ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿಗಿಂತ ನಮ್ಮ ಊರಿನಲ್ಲಿ ನಮಗೆ ಹೆಚ್ಚು ಸುರಕ್ಷತೆ ಎನಿಸುತ್ತದೆ ಎಂದರು.
ಬಾಗಲಕೋಟೆಯ ಲೋಕಾಪುರದ ನಿವಾಸಿ ಅನಿಲ್ ಮೈಗೇರಿ, ಕೆಂಗೇರಿ, ಬಿಡದಿ ಸುತ್ತಮುತ್ತ ಆಟೋಮೊಬೈಲ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸುತ್ತಮುತ್ತ ಗ್ರಾಮಗಳ ನಾವು 12 ಮಂದಿ ಕಂಪೆನಿಗಳಲ್ಲಿ ಅನುಮತಿ ಕೇಳಿ ಊರಿಗೆ ಹೋಗುತ್ತಿದ್ದೇವೆ, ಇಲ್ಲಿದ್ದರೆ ಊರಿನಲ್ಲಿರುವ ನಮ್ಮ ಮನೆಯವರಿಗೆ ಸುದ್ದಿ ನೋಡಿ ಭಯ, ಆತಂಕವಾಗುತ್ತಿದೆ ಎಂದರು.
ನ್ಯೂ ಸಂಡೆ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಲವರು ಊರಿಗೆ ಬರುತ್ತಿದ್ದಾರೆ. ಜಿಲ್ಲೆಯೊಳಗೆ ಸಂಚರಿಸಿ ಬರುವುದರಿಂದ ಹೋಂ ಕ್ವಾರಂಟೈನ್ ನಲ್ಲಿ ಇರಿ ಎಂದು ಅವರಿಗೆ ಹೇಳಲು ಸಾಧ್ಯವಿಲ್ಲ ಎಂದರು.
ಬೆಂಗಳೂರಿನಿಂದ ಬಂದವರ ಬಗ್ಗೆ ದಾಖಲೆಗಳು: ಬೆಂಗಳೂರಿನಿಂದ ಊರಿಗೆ ಬರುವವರ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು ಅವರ ಮಾರ್ಗಸೂಚಿಗೆ ಕಾಯುತ್ತಿದ್ದೇವೆ. ಸರ್ಕಾರ ಮಾಡದಿದ್ದರೆ ಈ ಬಗ್ಗೆ ನಾವು ಗಮನಹರಿಸಬೇಕಾಗುತ್ತದೆ. ಊರಿಗೆ ಬಂದವರಿಂದ ಇಲ್ಲಿ ಹಳ್ಳಿಯಲ್ಲಿ ಸೋಂಕು ತಗಲುವ ಸಾಧ್ಯತೆಯಿದೆ. ಬೆಂಗಳೂರಿನಿಂದ ಬಂದವರ ಬಗ್ಗೆ ವಿವರಗಳನ್ನು ಪಡೆದು ಪ್ರತ್ಯೇಕವಾಗಿ ನಿರ್ವಹಿಸಿ ಎಂದು ನಾನು ಎಲ್ಲಾ ಗ್ರಾಮಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೆಂಗಳೂರಿನಿಂದ ಬಂದವರ ಬಗ್ಗೆ ಗ್ರಾಮಸ್ಥರು ಆತಂಕಕ್ಕೊಳಗಾಗಬೇಡಿ ಎಂದು ನಾನು ಈ ಸಂದರ್ಭದಲ್ಲಿ ಹೇಳುತ್ತೇನೆ ಎಂದು ಗೋವಿಂದ ರೆಡ್ಡಿ ತಿಳಿಸಿದ್ದಾರೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ