ಗುರಿ ಮುಟ್ಟಲು ಇಲ್ಲಿಗೆ ಬನ್ನಿ!ಗ್ರಂಥಾಲಯವೀಗ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರನಗರ ಕೇಂದ್ರ ಗ್ರಂಥಾಲಯಕ್ಕೆ ಈಗ ಶೈಕ್ಷಣಿಕ ರೂಪ ಬಂದಿದೆ. ಯುವಜನರಲ್ಲೂ ಉತ್ಸಾಹ ಹೆಚ್ಚಿದೆಬಿ.ಕೆ.ಲಕ್ಷ್ಮಿಕಿರಣ್, ಮುಖ್ಯಗ್ರಂಥಪಾಲಕಿ
ಕೆ.ನರಸಿಂಹಮೂರ್ತಿ
ಬಳ್ಳಾರಿ: ನಗರ ಕೇಂದ್ರ ಗ್ರಂಥಾಲಯವು ಈಗ ತನ್ನ ಸಾಂಪ್ರದಾಯಿಕ ಸ್ವರೂಪವನ್ನು ದಾಟಿ ಹೊಸ ಕಾಲದ ಯುವಜನರ ಅಧ್ಯಯನದ ಅಗತ್ಯಗಳನ್ನು ಪೂರೈಸು ವತ್ತ ದಾಪುಗಾಲಿಟ್ಟಿದೆ. ಯಾವುದೇ ವಿಶ್ವವಿದ್ಯಾಲಯ ಅಥವಾ ಉನ್ನತ ಮಟ್ಟದ ಕಾಲೇಜು ಕ್ಯಾಂಪಸ್ ನಲ್ಲಿರಬಹುದಾದ ಎಲ್ಲ ಅಧ್ಯಯನ ಸಾಮಗ್ರಿಗಳೊಂದಿಗೆ ಸೂಕ್ತ ಮಾರ್ಗದರ್ಶನವೂ ಇಲ್ಲಿ ದೊರಕುತ್ತಿದೆ.
ಸಾಂಸ್ಕೃತಿಕ ಸಮುಚ್ಛಯದ ಆವರಣದಲ್ಲಿರುವ ಬ್ರೂಸ್‌ಪೂಟ್ ಮ್ಯೂಸಿಯಂ ಇತಿಹಾಸಕ್ಕೆ ಆದ್ಯತೆ ನೀಡಿದ್ದರೆ, ಬಯಲು ರಂಗಮಂದಿರ ಕಲೆಗೆ ಆದ್ಯತೆ ನೀಡಿದೆ. ಇವುಗಳಿಗಿಂತ ಭಿನ್ನವಾಗಿ ಗ್ರಂಥಾಲಯವು ಶೈಕ್ಷಣಿಕ ಮತ್ತು ಔದ್ಯೋಗಿಕ ನೆಲೆಯಲ್ಲಿ ಯುವಜನರಿಗೆ ನೆರವಾಗುತ್ತಿರುವುದು ವಿಶೇಷ.
ಗ್ರಂಥಾಲಯ ಈಗ ಡಿಜಿಟಲ್ ಗ್ರಂಥಾಲಯವೂ ಆಗಿದೆ. ಡಿಜಿಟಲ್ ಪುಸ್ತಕಗಳನ್ನು ಓದುವ ಅವಕಾಶವೂ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಕಾಲೇಜು ವಿದ್ಯಾರ್ಥಿಗಳಿಗೆ ದೊರಕುತ್ತಿದೆ. ಅಷ್ಟೇ ಅಲ್ಲ. ಗ್ರಂಥಾಲಯದ ಮೇಲ್ಭಾಗದ ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವೂ ಇದೆ. ಅಲ್ಲಿ ವಿಶೇಷವಾಗಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಲು ಬೇಕಾದ ಎಲ್ಲ ಬಗೆಯ ಪುಸ್ತಕಗಳ ಸಂಗ್ರಹವೂ ಇದೆ.
ಹೀಗಾಗಿಯೇ ಬೆಳಿಗ್ಗೆ 10.30ಕ್ಕೆ ಗ್ರಂಥಾಲಯ ತೆರೆಯುವ ಅರ್ಧ ಗಂಟೆ ಮುಂಚಿತವಾಗಿಯೇ ನೂರಾರು ವಿದ್ಯಾರ್ಥಿಗಳು ಗ್ರಂಥಾಲಯದ ಆವರಣದಲ್ಲಿ ನೆರೆಯುತ್ತಾರೆ. ಬಾಗಿಲು ತೆಗೆಯುವುದನ್ನೇ ಕಾಯುವ ಅವರಲ್ಲಿ ಬಹುತೇಕರು ಬೆಳಿಗ್ಗೆಯಿಂದ ಸಂಜೆವರೆಗೂ ಅಧ್ಯಯನದಲ್ಲಿ ತೊಡಗುತ್ತಾರೆ.
ಡಿಜಿಟಲ್ ಗ್ರಂಥಾಲಯದ ಜೊತೆಗೆ ಈಗ ಗ್ರಂಥಾಲಯದ ಆವರಣದಲ್ಲೇ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ತರಬೇತಿಯೂ ನಡೆಯುತ್ತಿದೆ.
ಜಿಲ್ಲಾ ಖನಿಜ ನಿಧಿಯ ಅಡಿ ಜಿಲ್ಲಾಡಳಿತವೇ ಡಿ.26ರಿಂದ ತರಬೇತಿಯನ್ನೂ ಆರಂಭಿಸಿರುವುದು ವಿಶೇಷ. ತರಬೇತಿಗೆ ಆಯ್ಕೆ ಮಾಡಲೆಂದೇ ನಗರದ ಸರಳಾದೇವಿ ಕಾಲೇಜಿನಲ್ಲಿ ಪ್ರವೇಶ ಪರೀಕ್ಷೆಯನ್ನೂ ನಡೆಸಲಾಗಿತ್ತು. ಅದರಲ್ಲಿ ಉತ್ತೀರ್ಣರಾದ 150 ಮಂದಿಯನ್ನು ಆಯ್ಕೆ ಮಾಡಿ ಜನವರಿ ಎರಡನೇ ವಾರದಿಂದಲೇ ಇನ್‌ಸೈಟ್ ಆನ್ ಇಂಡಿಯಾದ ಸಂಪನ್ಮೂಲ ವ್ಯಕ್ತಿಗಳು ತರಗತಿಗಳನ್ನು ನಡೆಸುತ್ತಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಂಥಾಲಯದ ಮುಖ್ಯ ಗ್ರಂಥಪಾಕಿ ಬಿ.ಕೆ.ಲಕ್ಷ್ಮಿಕಿರಣ್, ‘ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು, ಯುವಜನರು ಮೊದಲು ಲಭ್ಯವಿದ್ದ ಪುಸ್ತಕಗಳನ್ನು ಹುಡುಕಿ ಓದಬೇಕಾಗಿತ್ತು. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವವರಿಗಾಗಿಯೇ ಕೇಂದ್ರ ವನ್ನು ಆರಂಭಿಸಿ, ಅಲ್ಲಿಯೇ ಎಲ್ಲ ಪುಸ್ತಕಗಳನ್ನೂ ಸಂಗ್ರಹಿಸಿಟ್ಟಿ ರುವುದರಿಂದ ಅಧ್ಯಯನಕ್ಕೆ ಅನುಕೂಲವಾಗಿದೆ’ ಎಂದು ಹೇಳಿದರು.
‘ಗ್ರಂಥಾಲಯಕ್ಕೆ ಬರುವ ಓದುಗರ ಸಂಖ್ಯೆಯೂ ಹೆಚ್ಚಾಗಿದೆ. ಅವರಲ್ಲಿ ಯುವ ಓದುಗರು ಹೆಚ್ಚಿದ್ದಾರೆ. ಅವರ ಆಸಕ್ತಿ, ಜೀವನದ ಗುರಿಗಳಿಗೆ ಅನುಗುಣವಾಗಿಯೇ ಈಗ ಗ್ರಂಥಾಲಯವನ್ನು ಹೊಸ ರೂಪದಲ್ಲಿ ಮಾರ್ಪಡಿಸಿ ಸಜ್ಜುಗೊಳಿಸಲಾಗಿದೆ. ಜಿಲ್ಲಾಡಳಿತದ ನೆರವು ಕೂಡ ಸ್ಮರಣೀಯ’ ಎಂದು ಹೇಳಿದರು.
ನಗರ ಕೇಂದ್ರ ಗ್ರಂಥಾಲಯವನ್ನು ಕೇಂದ್ರ ವನ್ನಾಗಿಸಿಕೊಂಡು ತರಬೇತಿ ನೀಡುತ್ತಿರುವ ಜಿಲ್ಲಾಡಳಿತವು, ಆನ್ ಲೈನ್‌ನಲ್ಲೂ ಒಂದು ದಿನ ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಸಂಕನೂರ್ ಅವರ ನೇತೃತ್ವದಲ್ಲಿ ಮಾರ್ಗದರ್ಶಿ ಉಪನ್ಯಾಸವನ್ನು ಏರ್ಪಡಿಸಿತ್ತು. ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಅವರು ಸ್ಪರ್ಧಾತ್ಮಕ ಪರೀಕ್ಷೆ, ಅದರಲ್ಲೂ ಯುಪಿಎಸ್‌ಸಿ ಪರೀಕ್ಷೆ ಕುರಿತು ಪ್ರಾಥಮಿಕ ಮಾಹಿತಿಗಳನ್ನು ನೀಡಿ, ಸಂವಾದ ನಡೆಸಿದ್ದರು. ‘ಈಗ ತರಬೇತಿ ಪಡೆಯುತ್ತಿರುವವರು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೇಕಾದ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಂಡ ಬಳಿಕ ಅವರು ಬಯಸಿದರೆ ಪರೀಕ್ಷೆಗಳಿಗೆ ಹಾಜರಾಗಲು ಮಾರ್ಗದರ್ಶನ ನೀಡಲಾಗುವುದು’ ಎಂದು ಅವರು ತಿಳಿಸಿದರು.
(ಮಾಹಿತಿ ಕೃಪೆ ಪ್ರಜಾವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ