ಬೀದರ್, ಜೂನ್ 01; ಬೀದರ್ ಜಿಲ್ಲೆಯಲ್ಲಿ ಕ್ಷೀಪ್ರಗತಿಯಲ್ಲಿ ಏರಿಕೆಯಾಗುತ್ತಿದ್ದ ಕೋವಿಡ್ ಸೋಂಕು ಮೇ ತಿಂಗಳಿನಲ್ಲಿ ದಿಢೀರ್ ಇಳಿಕೆ ಕಂಡಿದೆ. ಇದು ಒಂದು ಕಡೆ ಸಂತೋಷ ಹಾಗೂ ಮತ್ತೊಂದೆಡೆ ಚರ್ಚೆಗೆ ಗ್ರಾಸವಾಗಿದೆ. ದಿನಂಪ್ರತಿ 500ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಸರ್ಕಾರ ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ಭಾರೀ ಇಳಿಕೆ ಕಂಡಿದೆ.
ಕಳೆದ ಒಂದು ವಾರದಲ್ಲಿ ನೂರಕ್ಕಿಂತ ಕಡಿಮೆ ಹೊಸ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ಸೋಮವಾರ ಬೀದರ್ ಜಿಲ್ಲೆಯಲ್ಲಿ ಕೇವಲ 17 ಪ್ರಕರಣಗಳು ವರದಿಯಾಗಿವೆ. ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಅತಿ ಕಡಿಮೆ ಪ್ರಕರಣ ದಾಖಲಾಗಿದ್ದು ಮೇ 31ರಂದು.
ಲಾಕ್‌ಡೌನ್ ಜಾರಿಯಿಂದಾಗಿ ಸಹಜವಾಗಿಯೇ ಜನಸಂಚಾರ ಕಡಿಮೆಯಾಗಿದೆ. ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ ಜನ ಆತಂಕಕ್ಕೊಳಗಾಗಿ ಕೋವಿಡ್ ನಿಯಮ ಪಾಲನೆಯಿಂದ ಸೋಂಕು ಪ್ರಕರಣಗಳು ಇಳಿಕೆ ಕಂಡಿವೆ ಎಂಬ ಬಗ್ಗೆಯೂ ಜಿಲ್ಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ.
ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚು ದಾಖಲಾಗಿದ್ದರೂ ಸಾವಿನ ಪ್ರಮಾಣ ಕಡಿಮೆ ಇತ್ತು. ಆದರೆ, 2ನೇ ಅಲೆ ಹಾಗಲ್ಲ, ಕೇವಲ ಶಿಕ್ಷಕ ವರ್ಗದಲ್ಲೇ ಅಂದಾಜು 55ಕ್ಕಿಂತ ಹೆಚ್ಚಿನ ಸಾವುಗಳು ದಾಖಲಾಗಿವೆ. ದಿನನಿತ್ಯ ಸರಾಸರಿ 5 ಸಾವಿನ ಪ್ರಮಾಣ ವರದಿಯಾಗಿವೆ.
ಜಿಲ್ಲಾಡಳಿತ ಕೋವಿಡ್ 2ನೇ ಅಲೆಯನ್ನು ನಿಭಾಯಿಸುವಲ್ಲಿ ತಕ್ಕಮಟ್ಟಿಗೆ ಯಶಸ್ಸುಕಂಡಿದೆ. ನಿರಂತರ ಪ್ರಚಾರ, ಜಾಗೃತಿ ಲಸಿಕೆ ನೀಡಿಕೆಯಲ್ಲಿ ಜಿಲ್ಲಾಡಳಿತ ಕ್ಷೀಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿದ ಹಿನ್ನೆಲೆ ಸೋಂಕಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.
ವಿರೋಧ ಪಕ್ಷದ ಶಾಸಕರು ಹೇಳುವ ಅಸಲಿ ಕಥೆಯೇ ಬೇರೆಯಾಗಿದೆ. ಭಾಲ್ಕಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳುವ ಪ್ರಕಾರ, "ಜಿಲ್ಲಾಡಳಿತ ಸೋಂಕು ಪರೀಕ್ಷೆಗಳನ್ನು ತಗ್ಗಿಸಿದ್ದೇ ಸೋಂಕು ಇಳಿಕೆ ಕಾಣಲು ಪ್ರಮುಖ ಕಾರಣ" ಎಂದು ಆರೋಪಿಸುತ್ತಿದ್ದಾರೆ.
ದಿನನಿತ್ಯ 6 ಸಾವಿರ ಪರೀಕ್ಷೆ ನಡೆಸಲಾಗುತ್ತಿತ್ತು. ಲಾಕ್‌ಡೌನ್ ಆರಂಭವಾದ ಬಳಿಕ ಪರೀಕ್ಷೆ ಸಂಖ್ಯೆ 1030ಕ್ಕೆ ಇಳಿಸಲಾಗಿದೆ. ಪರೀಕ್ಷೆಗಳನ್ನು ಕಡಿಮೆ ಮಾಡಿದ್ದು ಏಕೆ? ಎಂದು ಜಿಲ್ಲಾಡಳಿತಕ್ಕೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಇದೇ ಪ್ರಶ್ನೆ ಎತ್ತಿದ್ದಾರೆ. "ಲಾಕ್‌ಡೌನ್‌ಗಿಂತ ಮುಂಚಿತವಾಗಿ 26-3-2021ರಿಂದ 26-4-2021ರವರೆಗೆ 102003 ಪರೀಕ್ಷೆಗಳನ್ನು ನಡೆಸಲಾಗಿತ್ತು. 27-4-2021 ರಿಂದ 24-5-2021ರವರೆಗೆ ಕೇವಲ 65788 ಪರೀಕ್ಷೆಗಳನ್ನು ಮಾತ್ರ ಮಾಡಲಾಗಿದೆ" ಎಂದು ಹೇಳಿದ್ದಾರೆ.
ಜಿಲ್ಲಾಡಳಿತ ಸೋಂಕು ಪರೀಕ್ಷೆ ತಗ್ಗಿಸಿದ್ದೇ ಸೋಂಕು ಪ್ರಕರಣಗಳು ಕಡಿಮೆಯಾಗಲು ಕಾರಣ ಎಂದು ಶಾಸಕರು ನೇರ ಆರೋಪ ಮಾಡಿದ್ದಾರೆ. ಆದರೆ ಆರೋಪಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭುಚೌವ್ಹಾಣ್ ಸ್ಪಷ್ಟೀಕರಣ ನೀಡಿಲ್ಲ.
(ಮಾಹಿತಿ ಕೃಪೆ Oneindia )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ