ಚಿಕ್ಕಮಗಳೂರು: ನಿನ್ನೆ ಮಧ್ಯಾಹ್ನ ಸುಮಾರಿಗೆ ಸೈಕಲ್ನಲ್ಲಿ ಮನೆಗೆ ಮರಳುತ್ತಿದ್ದ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಕುರಿತ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ಮಾತ್ರವಲ್ಲ, ಹಲ್ಲೆಗೆ ಕಾರಣವೇನು ಎಂಬುದು ಕೂಡ ಬಹಿರಂಗಗೊಂಡಿದ್ದು, ನಾಲ್ವರು ಆರೋಪಿಗಳ ಬಂಧನವೂ ಆಗಿದೆ.
ತರೀಕೆರೆ ವೈದ್ಯ ಡಾ.ದೀಪಕ್ ಎಂಬವರ ಮೇಲೆ ಹಲ್ಲೆ ಆಗಿದ್ದು, ಅದೇ ಊರಿನ ವೇಣುಗೋಪಾಲ್, ಚಂದ್ರಶೇಖರ್, ನಿತಿನ್, ವೆಂಕಟೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಅಗ್ನಿಶಾಮಕ ಠಾಣೆ ಬಳಿ ಈ ಕೃತ್ಯ ನಡೆದಿದ್ದು ಡಾ.ದೀಪಕ್ ಕ್ಲಿನಿಕ್ನಿಂದ ಮನೆಗೆ ಸೈಕಲ್ನಲ್ಲಿ ಹೋಗುತ್ತಿದ್ದಾಗ ಈ ದಾಳಿ ನಡೆದಿದೆ. ಮಚ್ಚಿನಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅವರನ್ನು ಅಲ್ಲೇ ರಸ್ತೆ ಬದಿ ತಳ್ಳಿ ಹೋಗಿದ್ದರು.
ಆರೋಪಿಗಳ ಪೈಕಿ ಒಬ್ಬರ ಸಹೋದರಿಯ ಪುತ್ರ, ಅಜ್ಜಂಪುರ ತಾಲೂಕಿನ ತಡಗ ಗ್ರಾಮದ 9 ವರ್ಷದ ಬಾಲಕನನ್ನು ಡಾ. ದೀಪಕ್ ಅವರ ಕ್ಲಿನಿಕ್ಗೆ ಕರೆತರಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಶಿವಮೊಗ್ಗಕ್ಕೆ ಕರೆದೊಯ್ಯಲಾಗಿತ್ತು. ಆದರೆ ಮೇ 29ರಂದು ಈ ಬಾಲಕ ಮೃತಪಟ್ಟಿದ್ದ. ಈ ಸಾವಿಗೆ ಡಾ. ದೀಪಕ್ ಕಾರಣವೆಂಬ ದ್ವೇಷದಿಂದ ಬಾಲಕನ ಕಡೆಯವರು ಈ ಹಲ್ಲೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಶಿವಮೊಗ್ಗದ ಆಸ್ಪತ್ರೆಯಲ್ಲಿ ಡಾ.ದೀಪಕ್ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಮಾಹಿತಿ ಕೃಪೆ ವಿಜಯವಾಣಿ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ