ಬೆಂಗಳೂರು, ಜೂ. 1: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸುದ್ದಿಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ದೆಹಲಿಗೆ ಭೇಟಿ ನೀಡಿರುವುದು ಮತ್ತೆ ರಾಜ್ಯ ರಾಜಕೀಯದಲ್ಲಿ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಬೆನ್ನಲ್ಲೇ ಬಿ ವೈ ವಿಜಯೇಂದ್ರ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಯಾರು ಎಲ್ಲಿಗೆ ಬೇಕಾದರೂ ಹೋಗಲಿ, ನಾವು ರಾಜಕೀಯವಾಗಿ ಮಾಡಿದ್ದನ್ನೇ ಅನುಭವಿಸುತ್ತೇವೆ, ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ ವಿಜಯೇಂದ್ರ ದೆಹಲಿ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಇವರೆಲ್ಲರೂ ಪವರ್ ಬೆಗ್ಗರ್ಸ್, ಅವರ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳಿದ್ದಾರೆ.
ಯಾರು ಎಲ್ಲಿ ಬೇಕಾದರೂ ಹೋಗಲಿ. ನಾವು ಆ ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡುವುದು ಬೇಡ. ಎಲ್ಲರನ್ನೂ ಯಡಿಯೂರಪ್ಪ ತಮ್ಮ ಪಕ್ಷಕ್ಕೆ ಕರೆತಂದ್ರು. ಈಗ ಅವರು ಅನುಭವಿಸುತ್ತಿದ್ದಾರೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರದ ಕೋವಿಡ್ ಪ್ಯಾಕೇಜ್ ವಿಚಾರದಲ್ಲಿ ಮಾತನಾಡಿದ ಡಿಕೆಶಿ, ಇದು ರೀಲ್ ಪ್ಯಾಕೇಜ್, ನಿಜವಾಗಿ ಕಷ್ಟದಲ್ಲಿರುವವರಿಗೆ ಅರ್ಜಿ ಹಾಕಲು ಆಗುತ್ತಾ? ಯಾರು ಪರಿಹಾರಕ್ಕೆ ಅರ್ಜಿ ಹಾಕಿದ್ದಾರೆ? ನಿಜವಾಗಿ ಕಷ್ಟದಲ್ಲಿ ಇರುವ ಹಲವು ಮಂದಿಗೆ ಏನು ವಿಷಯ, ಈ ಅರ್ಜಿ ಹಾಕುವುದು ಹೇಗೆ ಎಂಬುದು ತಿಳಿದಿರಲ್ಲ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.
ಇನ್ನು ಸಂಕಷ್ಟದಲ್ಲಿ ಇರುವವರಿಗೆ ಆನ್‌ಲೈನ್ ಅರ್ಜಿ ಹಾಕುವುದು ತಿಳಿದಿದ್ದರೆ, ವಿಧಾನ ಸೌಧಕ್ಕೆ ಬಂದು ಕೆಲಸ ಮಾಡುತ್ತಿದ್ದರು. ಆ ಬಗ್ಗೆ ತಿಳಿಯದ ಕಾರಣದಿಂದ ಅಲ್ಲವೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದು ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಕೊರೊನಾ ಸಾವಿನ ಬಗ್ಗೆ ಸುಳ್ಳು ಅಂಕಿ-ಅಂಶ ಕೊಡುತ್ತಿಲ್ಲ ಎಂಬ ಆರೋಗ್ಯ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಸುಧಾಕರ್ ಅಣ್ಣ ನೀನು ಮೊದಲು ಔಷಧಿ ಕೊಡಿಸುವುದನ್ನು ನೋಡು. ನಿನಗೆ ಡೆತ್ ಆಡಿಟ್ ಕಾರ್ಯ ಬೇಡ. ಅದನ್ನು ಮಾಡಲು ಮುನ್ಸಿಪಲ್, ರೆವಿನ್ಯೂ ಡಿಪಾಟ್ರ್ಮೆಂಟ್ ಇದೆ. ಅವರು ಈ ಲೆಕ್ಕಾಚಾರ ನೋಡಿಕೊಳ್ಳುತ್ತಾರೆ. ನೀನು ಈಗ ಔಷಧಿ, ಲಸಿಕೆ ಬಗ್ಗೆ ಗಮನ ಕೊಡು ಎಂದು ಸಿಡಿಮಿಡಿಗೊಂಡರು. ಹಾಗೆಯೇ ರಾಜಸ್ಥಾನದಲ್ಲಿ ಡೆತ್ ಆಡಿಟ್ ಮಾಡಿಸುತ್ತಿದ್ದಾರೆ, ನೀವು ಕೂಡಾ ಮರಣ ಪ್ರಮಾಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.
ಇನ್ನು ಉತ್ತರಕರ್ನಾಕದ ರೈತರ ಪರಿಸ್ಥಿತಿ ಶೋಚನೀಯ, ನಾನು ನಿನ್ನೆ ಅಲ್ಲಿಗೆ ಭೇಟಿ ನೀಡಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ರೈತರ ತರಕಾರಿ, ಹೂ ಎಲ್ಲವನ್ನು ಸರ್ಕಾರ ಖರೀದಿ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದರು.
ಈ ಸಂದರ್ಭದಲ್ಲೇ ದೇವೇಗೌಡರ ಬಗ್ಗೆ ಮಾತನಾಡಿ, ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಪೂರೈಸಿದ್ದಾರೆ. ದೇವೇಗೌಡರದ್ದು ಹೋರಾಟದ ಜೀವನ. ದೆಹಲಿಯಲ್ಲಿ ದಕ್ಷಿಣ ಭಾರತದವರು ಉತ್ತರ ಭಾರತದವರ ಎದುರು ರಾಜಕೀಯ ನಡೆಸುವುದು ಅಷ್ಟು ಸುಲಭವಾದ ವಿಚಾರವಲ್ಲ. ಹಾಗಿರುವಾಗ ದೇವೇಗೌಡರು ಪ್ರಧಾನಿಯಾಗಿದ್ದರು. ರಾಜ್ಯದ ಜನರು ನೋವಿಗೆ ಸ್ಪಂಧಿಸುತ್ತಿದ್ದರು ಎಂದು ಶ್ಲಾಘಿಸಿದರು.
(ಒನ್‌ಇಂಡಿಯಾ ಸುದ್ದಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ