ಚಿಕ್ಕಮಗಳೂರು, ಜೂನ್ 15: ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ವಿಧಿವಶ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸ್ವಗ್ರಾಮ ಪಂಚನಹಳ್ಳಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಲಿಂಗಾಯತ ಸಮುದಾಯದ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ಮಾಡಲಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮ ಸಂಚಾರಿ ವಿಜಯ್ ಅವರ ಹುಟ್ಟೂರಾಗಿದೆ.
ಸಂಚಾರಿ ವಿಜಯ್ ಸ್ನೇಹಿತ ರಘು ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಲಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ನಟ ವಿಜಯ್ ಹುಟ್ಟೂರು ಪಂಚನಹಳ್ಳಿಯಲ್ಲಿ ಮಣ್ಣಲ್ಲಿ ಮಣ್ಣಾಗಲಿದ್ದಾರೆ.
ಪಂಚನಹಳ್ಳಿಗೆ ಬಂದಾಗ ಇದೇ ತೋಟದಲ್ಲಿ ಸಂಚಾರಿ ವಿಜಯ್ ಕಾಲ ಕಳೆಯುತ್ತಿದ್ದ ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಂತಿಮ ವಿಧಿ ವಿಧಾನ ನಡೆಯಲಿದ್ದು, ಕುಪ್ಪೂರು ಮಠದ ಮಠಾಧೀಶರ ನೇತೃತ್ವದಲ್ಲಿ ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡಲಾಗುತ್ತಿದೆ.
ವೀರಶೈವ ಲಿಂಗಾಯಿತ ವಿಧಿವಿಧಾನ ಪ್ರಕಾರ ಅಂತ್ಯಕ್ರಿಯೆ
"ನಟ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯಿತ ಸಮುದಾಯದ ವಿಧಿವಿಧಾನಗಳ ಪ್ರಕಾರ ನಡೆಸಲಾಗುವುದು,'' ಎಂದು ಕುಪ್ಪೂರು ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಈ ಕುರಿತು ಪಂಚನಹಳ್ಳಿಯಲ್ಲಿ ಮಾತನಾಡಿದ ಅವರು, "ವೀರಶೈವ ಲಿಂಗಾಯತ ಸಮುದಾಯದ ಷೋಡಶ ಕ್ರಿಯೆಗಳ ಮೂಲಕ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗುವುದು. ವೀರಶೈವ ಸಮುದಾಯದ ಪ್ರಕಾರ ಲಿಂಗೈಕ್ಯ, ಶಿವೈಕ್ಯರಾದರು ಎಂಬ ರೂಪದಲ್ಲಿ ಭಾವಿಸಿಕೊಂಡು ಬಿಲ್ವಪತ್ರೆ, ವಿಭೂತಿ ಹಾಗೂ ಪಂಚ ಕಳಸವನ್ನು ಸ್ಥಾಪನೆ ಮಾಡಿಕೊಂಡು, ವಿವಿಧ ಶಾಸ್ತ್ರೋಸ್ತ್ರಗಳ ಅನ್ವಯ ಅಂತ್ಯಕ್ರಿಯೆ ನಡೆಸಲಾಗುವುದು,'' ಎಂದು ತಿಳಿಸಿದರು
ಇದೇ ವೇಳೆ ಮಾತನಾಡಿ, "ಸಂಚಾರಿ ವಿಜಯ್ ಮೃತಪಟ್ಟಿರುವುದು ನಮಗೆ ಆಘಾತ ತಂದಿದೆ. ಅವರ ಸಾವಿನಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಇನ್ನು ಸಂಚಾರಿ ವಿಜಯ್ ಅಭಿನಯ ಅಮೋಘವಾದದ್ದು, ಎಂತಹ ಪಾತ್ರವನ್ನು ನೀಡಿದರೂ, ಅದನ್ನು ಶ್ರದ್ಧೆಯಿಂದ ಮಾಡಿ ಸೈ ಎನಿಸಿಕೊಂಡಿದ್ದರು,'' ಎಂದು ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
(ಮಾಹಿತಿ ಕೃಪೆ Oneindia)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ