ಆದರೆ ಇದೀಗ ಅವರ ಪರೀಕ್ಷೆ ಮಾಡಿದ ಡಾ.ಅರುಣ್ ನಾಯ್ಕ್ ಅವರು ಎರಡೂ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ, ಇದರರ್ಥ ಬ್ರೈನ್ ಡೆಡ್ ಆಗಿರುವುದು ನಿಶ್ಚಿತವಾಗಿದೆ. ಅವರಿಗೆ ಎರಡು ಬಾರಿ ಅಪ್ನಿಯಾ ಟೆಸ್ಟ್ ಮಾಡಿದ್ದು, ಎರಡರಲ್ಲಿಯೂ ಬ್ರೇನ್ ಡೆಡ್ ಆಗಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ಬದುಕಿರಬಹುದೇನೋ ಎಂಬ ಚಿಕ್ಕ ಕೊನೆಯ ಆಸೆಯೂ ಕಮರಿ ಹೋಗಿದೆ.
ಆರೋಗ್ಯ ಇಲಾಖೆಯಡಿ ಕಾರ್ಯ ನಿರ್ವಹಿಸುವ ಜೀವ ಸಾರ್ಥಕತೆ ತಂಡದಿಂದ ಅಂಗಾಂಗ ದಾನ ಕುರಿತು ಮುಂದಿನ ಪ್ರಕ್ರಿಯೆ ನಡೆಯಲಿದೆ. 9 ರಿಂದ 9:30 ರ ತನಕ ಅಂಗಾಂಗ ತೆಗೆಯುವ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ಲಿವರ್, ಎರಡು ಕಿಡ್ನಿ, ಎರಡು ಕಣ್ಣು ಸದ್ಯ ಟ್ರಾನ್ಸ್‌ಪ್ಲಾಂಟ್ ಮಾಡಲಾಗುತ್ತದೆ. ಹೃದಯದ ಟಿಶ್ಯು ವಾಲ್ವ್ ಕೂಡ ಟ್ರಾನ್ಸ್‌ಪ್ಲಾಂಟ್ ಗೆ ಹೋಗಲಿದೆ.
12.30 ರಿಂದ 1 ಗಂಟೆ ವೇಳೆಗೆ ಅಧಿಕೃತವಾಗಿ ಮೃತಪಟ್ಟಿರುವ ಬಗ್ಗೆ ಹೇಳಿಕೆ ನೀಡಲಾಗುತ್ತದೆ. ಅಂಗಾಗ ದಾನ ಪ್ರಕ್ರಿಯೆ ಮುಗಿದ ಬಳಿಕವೇ ಡೆತ್ ಡಿಕ್ಲೆರೇಷನ್ ಮಾಡಲಾಗುತ್ತದೆ. ಸದ್ಯ ಬ್ರೈನ್ ಡೆತ್ ಮಾತ್ರ ಆಗಿರುವ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿದೆ ಎಂದು ವೈದ್ಯ ಅರುಣ್ ನಾಯ್ಕ್ ಹೇಳಿದ್ದಾರೆ.
ನಾಳೆ ಅಂತಿಮ ದರ್ಶನ: ನಾಳೆ ಬೆಳಿಗ್ಗೆ 8 to 10 ಸಂಚಾರಿ ವಿಜಯ್ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಸರ್ಕಾರದ ಕಡೆಯಿಂದಲೇ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಹುಟ್ಟೂರು ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ನಿರ್ದೇಶಕ ಮನ್ಸೋರೆ ಹೇಳಿದ್ದಾರೆ.
ಜೂ.12ರ ರಾತ್ರಿ ಸ್ನೇಹಿತರೊಂದಿಗೆ ಬೈಕ್ನಲ್ಲಿ ಹೋಗುತ್ತಿರುವಾಗ ಜೆಪಿ ನಗರದ 7ನೇ ಹಂತದಲ್ಲಿ ಅಪಘಾತವಾಗಿ ಸಂಚಾರಿ ವಿಜಯ್ ತಲೆಗೆ ತೀವ್ರ ಪೆಟ್ಟಾಗಿತ್ತು. ಮಿದುಳಿನ ಬಲಭಾಗದಲ್ಲಿ ತೀವ್ರ ಗಾಯವಾಗಿ ರಕ್ತ ಸೋರುತ್ತಿದ್ದ ಹಿನ್ನೆಲೆ ಅವರರಿಗೆ ಬನ್ನೇರುಘಟ್ಟ ರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಮಿದುಳಿನ ಶಸ್ತ್ರ ಚಿಕಿತ್ಸೆ ಮಾಡಿ ಐಸಿಯುನಲ್ಲಿ ಇರಿಸಲಾಗಿತ್ತು. ಕೋಮದಲ್ಲಿದ್ದ ವಿಜಯ್ರ ಬ್ರೈನ್ ಫಂಕ್ಷನ್ ನಿಂತು ಹೋಗಿತ್ತು. ಟ್ರೀಟ್ಮೆಂಟ್ಗೆ ಅವರು ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇಂದು ಬೆಳಗ್ಗೆ ಬೆಳಗ್ಗೆ 10 ಗಂಟೆಗೆ ಮಿದುಳು ನಿಷ್ಕ್ರಿಯವಾಗಿತ್ತು. ನೋವಿನಲ್ಲೂ ವಿಜಯ್ರ ಅಂಗಾಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ರಂಗಪ್ಪ ಹೋಗ್ಬಿಟ್ನಾ' ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಸಂಚಾರಿ ವಿಜಯ್, 24ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 'ನಾನು ಅವನಲ್ಲ ಅವಳು' ಚಿತ್ರದ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದರು. ಇದೇ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಕೂಡ ಒಲಿದಿತ್ತು. ನಟರಾದ ವಾಸುದೇವರಾವ್, ಚಾರುಹಾಸನ್ ಬಳಿಕ ರಾಷ್ಟ್ರಪ್ರಶಸ್ತಿ ಪಡೆದ ಹೆಮ್ಮೆ ಇವರದ್ದು.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಂಚಮಹಳ್ಳಿಯಲ್ಲಿ 1983ರ ಜುಲೈ 18ರಂದು ಜನಿಸಿದ್ದ ಸಂಚಾರಿ ವಿಜಯ್, ಬಾಲ್ಯದಲ್ಲೇ ರಂಗಭೂಮಿ ಹಾಗೂ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದರು. ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಕೆಲಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ರಂಗಭೂಮಿಯತ್ತ ಕಾಲಿಟ್ಟರು. 'ಸಂಚಾರಿ' ನಾಟಕ ತಂಡದಲ್ಲಿ ನಟನಾ ತಾಲೀಮು ಆರಂಭಿಸಿದ್ದ ವಿಜಯ್, ಸಿನಿರಂಗಕ್ಕೆ ಬಂದ ನಂತರ ಸಂಚಾರಿ ವಿಜಯ್ ಅಂತಲೇ ಜನಪ್ರಿಯತೆ ಗಳಿಸಿದ್ದರು. ಕರ್ನಾಟಕ ಶಾಸ್ತ್ರೀಯ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದರು. ಇತ್ತೀಚಿಗೆ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಹಾಗೂ 'ಮೇಲೊಬ್ಬ ಮಾಯಾವಿ' ಚಿತ್ರಗಳಲ್ಲೂ ನಟಿಸಿದ್ದಾರೆ.
(ಮಾಹಿತಿ ಕೃಪೆ ವಿಜಯವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ