ನವದೆಹಲಿ: ಇಂದು ಅಂತಾರಾಷ್ಟ್ರೀಯ ಯೋಗ ದಿನದ ಏಳನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯಕ್ಕಾಗಿ ಯೋಗ ಎಂಬುದು ಮೂಲಮಂತ್ರ ಆಗಬೇಕು ಎಂಬ ಸಂದೇಶ ಸಾರಿದರು.
ಪ್ರಧಾನಿ ಮೋದಿ ಭಾಷಣದ ಸಾರಾಂಶ ಹೀಗಿದೆ..
ದೇಶದ ಜನತೆಗೆ ಯೋಗ ದಿನದ ಶುಭಕೋರುವ ಮೂಲಕ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಕರೊನಾ ನಡುವೆಯೂ ಯೋಗ ದಿನ ಆಚರಣೆ ಮಾಡಲಾಗುತ್ತದೆ. ಆದರೂ ನಮ್ಮ ಉತ್ಸಾಹ ಕಡಿಮೆ ಆಗಿಲ್ಲ. ಯೋಗ ಮಾಡುವ ಮೂಲಕ ಎಲ್ಲರು ಸ್ವಾಸ್ಥ್ಯರಾಗಬೇಕು. ಕರೊನಾ ಸಮಯದಲ್ಲೂ ಜನರು ಯೋಗವನ್ನು ಮರೆತಿಲ್ಲ. ಯೋಗ ಆತ್ಮಬಲವನ್ನು ಹೆಚ್ಚಿಸುತ್ತದೆ. ಕರೊನಾ ನಡುವೆ ಯೋಗ ನಮ್ಮೆಲ್ಲರ ಆಶಾಕಿರಣವಾಗಿದೆ.
ದೈಹಿಕ ಸ್ವಾಸ್ಥ್ಯದ ಜತೆಗೆ ಮಾನಸಿಕ ಸಾಮರ್ಥ್ಯವು ಮುಖ್ಯ. ಯೋಗ ಮಾಡುವುದರಿಂದ ವಿಶ್ವದ ಯಾವುದೇ ನಕರಾತ್ಮಕ ಶಕ್ತಿ ನಮ್ಮನ್ನು ಏನು ಮಾಡುವುದಿಲ್ಲ. ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕ ಶಕ್ತಿಯನ್ನಾಗಿ ಮಾಡಬಹುದು. ಯೋಗದಿಂದ ನಮ್ಮ ವಿಚಾರ ಶಕ್ತಿಯು ಹೆಚ್ಚಾಗುತ್ತದೆ. ಆರೋಗ್ಯಕ್ಕಾಗಿ ಯೋಗ ಎಂಬುದು ಮೂಲಮಂತ್ರ ಆಗಬೇಕು.
ಇಂದು ವೈದ್ಯಕೀಯ ವಿಜ್ಞಾನವು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಗುಣಪಡಿಸುವ ಪ್ರಕ್ರಿಯೆಗೆ ಒತ್ತು ನೀಡುತ್ತದೆ. ಗುಣಪಡಿಸುವ ಪ್ರಕ್ರಿಯೆಯಲ್ಲಿ ಯೋಗ ಸಹಾಯ ಮಾಡುತ್ತದೆ. 'ಯೋಗ ಫಾರ್ ವೆಲ್ನೆಸ್' ಎಂಬ ಧೇಯ್ಯ ವಾಕ್ಯದೊಂದಿಗೆ ಈ ಬಾರಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಜನರನ್ನು ಯೋಗ ಮಾಡಲು ಇನ್ನಷ್ಟು ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ದೇಶ, ಪ್ರದೇಶ ಮತ್ತು ಜನರು ಆರೋಗ್ಯವಾಗಿರಲು ನಾನು ಪ್ರಾರ್ಥಿಸುತ್ತೇನೆ.
ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಯೋಗವನ್ನು ರಕ್ಷಾಕವಚವಾಗಿ ಬಳಸಿದ್ದಾರೆ. ವೈದ್ಯರು, ದಾದಿಯರು ಯೋಗವನ್ನು ಕಲಿಸುತ್ತಾ ಅನುಲೋಮ, ವಿಲೋಮ, ಪ್ರಾಣಾಯಾಮದಂತಹ ಉಸಿರಾಟದ ವ್ಯಾಯಾಮ ಮಾಡುತ್ತಾರೆ. ಈ ವ್ಯಾಯಾಮಗಳು ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತವೆ ಎಂದು ಅಂತರರಾಷ್ಟ್ರೀಯ ತಜ್ಞರು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಹಯೋಗದೊಂದಿಗೆ ಭಾರತ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ. ಈಗ ಎಂ-ಯೋಗ ಅಪ್ಲಿಕೇಶನ್ ಬಿಡುಗಡೆ ಮಾಡಲಿದೆ. ಆಯಪ್ನಲ್ಲಿ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ವೀಡಿಯೊಗಳನ್ನು ಹೊಂದಿರುತ್ತದೆ. ಇದರಿಂದ ಯೋಗದ ಮಹತ್ವ ಮತ್ತಷ್ಟು ಜನರಿಗೆ ತಿಳಿಯಲಿದೆ. 'ಒಂದು ವಿಶ್ವ, ಒಂದು ಆರೋಗ್ಯ' ಧ್ಯೇಯವಾಕ್ಯದಲ್ಲಿ ಇದು ಸಹಾಯ ಮಾಡುತ್ತದೆ.
ಸ್ವಾಸ್ಥ್ಯಕ್ಕಾಗಿ ಯೋಗ
ವಿಶ್ವಸಂಸ್ಥೆಯ ವೆಬ್‌ಸೈಟ್ ಪ್ರಕಾರ, ಈ ವರ್ಷ 'ಸ್ವಾಸ್ಥ್ಯಕ್ಕಾಗಿ ಯೋಗ' ಎಂಬ ಥೀಮ್ನೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ ಮತ್ತು ಯೋಗದ ಅಭ್ಯಾಸವು ಪ್ರತಿಯೊಬ್ಬ ವ್ಯಕ್ತಿಯ ಸಮಗ್ರ ಆರೋಗ್ಯವನ್ನು ಹೇಗೆ ಉತ್ತೇಜಿಸುತ್ತದೆ ಎಂಬುದು ಈ ದಿನದ ಪ್ರಮುಖ ವಿಷಯವಾಗಿದೆ.
ಪ್ರತಿವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದರ ಕರಡು ನಿರ್ಣಯವನ್ನು ಅಂಗೀಕರಿಸಿ, ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. 177 ದೇಶಗಳು ಈ ನಿರ್ಣಯವನ್ನು ಬೆಂಬಲಿಸಿದ್ದು ಒಂದು ದಾಖಲೆಯಾಗಿ ಉಳಿದಿದೆ.
(ಮಾಹಿತಿ ಕೃಪೆ ವಿಜಯವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ