ಚೆನ್ನೈ: ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET)ಯು ಒಂದು ಬೆದರಿಕೆ ಎಂದು ಕಾಲಿವುಡ್ ನಟ ಸೂರ್ಯ ಶಿವಕುಮಾರ್ ಟ್ವಿಟರ್ ಮೂಲಕ ಕರೆ ನೀಡಿದರು. ಶಿಕ್ಷಣ ಎಂಬುದು ರಾಜ್ಯಗಳ ಜವಬ್ದಾರಿ ಮತ್ತು ಹಕ್ಕು ಆಗಿರಬೇಕು ಎಂದು ಸೂರ್ಯ ಹೇಳಿದ್ದಾರೆ.
ಶನಿವಾರ ಟ್ವೀಟ್ ಮಾಡಿರುವ ಸೂರ್ಯ, ನೀಟ್ ಅನ್ನು ರದ್ದುಪಡಿಸಿ ಎಂದು ಒತ್ತಾಯ ಮಾಡಿದ್ದಾರೆ. ಹಿಂದುಳಿದ ಸಮುದಾಯಗಳು ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯವನ್ನು ನೀಟ್ ಹಾನಿ ಮಾಡುತ್ತದೆ ಎಂದು ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ವೈದ್ಯಕೀಯ ಪ್ರವೇಶದ ಮೇಲೆ ನೀಟ್‌ನ ಪ್ರಭಾವವನ್ನು ಅಧ್ಯಯನ ಮಾಡಲು ತಮಿಳುನಾಡು ಸರ್ಕಾರವು ನ್ಯಾಯಮೂರ್ತಿ ಎ.ಕೆ.ರಾಜನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ನೇಮಕ ಮಾಡಿದ್ದು, ಈ ಸಮಿತಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೆರವು ನೀಡುವ ತಮ್ಮ ಅಗರಮ್ ಫೌಂಡೇಶನ್ ಪರವಾಗಿ ಸೂರ್ಯ ಪತ್ರವನ್ನು ಬರೆದಿದ್ದಾರೆ.
ನೀಟ್‌ನಂತಹ ಪರೀಕ್ಷೆಗಳಲ್ಲಿನ ಕಾಳಜಿಗಳ ಬಗ್ಗೆ ಸರ್ಕಾರ ಮತ್ತು ಅದರ ಬದಲಾವಣೆ ಮಾಡುವವರಿಗೆ ನಾವು ಸರಿಯಾಗಿ ತಿಳಿಸುವುದು ಕಡ್ಡಾಯವಾಗಿದೆ, ಇಲ್ಲದಿದ್ದರೆ ಅಂತಹ ಸಾಮಾನ್ಯ ಪರೀಕ್ಷೆಗಳು ನಮ್ಮ ಮಕ್ಕಳ ಭವಿಷ್ಯವನ್ನು ಹಾಳುಮಾಡುತ್ತವೆ ಎಂದು ಸೂರ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶಿಕ್ಷಣವನ್ನು ರಾಜ್ಯ ಜವಬ್ದಾರಿಯನ್ನಾಗಿ ಮಾಡಲು ಸೂರ್ಯ ಒತ್ತಾಯಿಸಿದ್ದಾರೆ. 'ಭಾಷೆ ಮತ್ತು ಸಂಸ್ಕೃತಿಯಲ್ಲಿ ವೈವಿಧ್ಯಮಯವಾಗಿರುವ ಭಾರತದಂತಹ ದೇಶಕ್ಕೆ, ಶಿಕ್ಷಣ ವ್ಯವಸ್ಥೆಯು ರಾಜ್ಯದ ಕೈಯಲ್ಲಿದ್ದರೆ ಮಾತ್ರ ನ್ಯಾಯ. ಇದರ ಮೂಲಕ ಶಾಶ್ವತ ಪರಿಹಾರವನ್ನು ನೋಡಬಹುದು. ಎಲ್ಲಾ ರಾಜ್ಯ ರಾಜಕೀಯ ಪಕ್ಷಗಳು ಒಂದಾಗಿ ಶಿಕ್ಷಣವನ್ನು ರಾಜ್ಯದ ಜವಾಬ್ದಾರಿ ಮತ್ತು ಹಕ್ಕನ್ನಾಗಿ ಮಾಡಲು ಕೆಲಸ ಮಾಡಬೇಕೆಂದು ನಾನು ವಿನಂತಿಸುತ್ತೇನೆ.' ಎಂದಿದ್ದಾರೆ.
ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣದ ಏಕೈಕ ಸಮರ್ಥ ಮೂಲವಾಗಿದೆ. ಶೇ 40% ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ ಮತ್ತು 25% ವಿದ್ಯಾರ್ಥಿಗಳು ತಮಿಳುನಾಡಿನ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿದ್ದಾರೆ. ಅದರಲ್ಲಿ ಕೇವಲ 20% ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣವನ್ನು ಪಡೆಯುತ್ತಾರೆಂದು ಸೂರ್ಯ ತಿಳಿಸಿದ್ದಾರೆ.
ನೀಟ್‌ನಂತಹ ಸಾಮಾನ್ಯ ಪರೀಕ್ಷೆಗಳು ಹಿಂದುಳಿದ ಮತ್ತು ಸರ್ಕಾರಿ ಶಾಲೆಗಳಿಂದ ಉತ್ತಮ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳನ್ನು ವಂಚಿತಗೊಳಿಸುತ್ತವೆ. ವೈದ್ಯರಾಗಬೇಕೆಂದು ಕನಸು ಕಾಣುವ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳು ನೀಟ್ ಅನುಷ್ಠಾನದಿಂದ ತೀವ್ರವಾಗಿ ದುರ್ಬಲರಾಗುತ್ತಾರೆ ಎಂದು ಸೂರ್ಯ ಹೇಳಿದ್ದಾರೆ.
ನೀಟ್‌ನ ಪ್ರಭಾವದ ಬಗ್ಗೆ ತನಿಖೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಯು ನೀಟ್ ಪ್ರವೇಶದ ಬಗ್ಗೆ ತಮ್ಮ ಅಭಿಪ್ರಾಯವನ್ನು neetimpact2021@gmail.com ಗೆ ಬರೆಯಲು ಸಾರ್ವಜನಿಕರನ್ನು ಆಹ್ವಾನಿಸಿದೆ. (ಏಜೆನ್ಸೀಸ್)
(ಮಾಹಿತಿ ಕೃಪೆ ವಿಜಯವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ