ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತಿಯೇ ಸ್ಥಳಕ್ಕೆ ತೋಟಗಾರಿಕೆ, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಜೆಂಟಾ ಕಂಪನಿಯ ವಿತರಕರು ರೈತರ ಬಳಿ ಆಗಮಿಸಿ ಬೀಜದ ಕೊರತೆಯಿಂದ ಅಭಾವವಾಗಿದ್ದು, ಇನ್ನು ಒಂದು ದಿನದಲ್ಲಿ 110 ಕೆಜಿ ಬೀಜವನ್ನು ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಳ್ಳಾರಿ: ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಯುವ ರೈತರ ಪರದಾಟ ಇನ್ನೂ ಕಡಿಮೆಯಾಗಿಲ್ಲ. ಕಳೆದ 10-15 ದಿನಗಳಿಂದ ಮೆಣಸಿನಕಾಯಿ ಬೀಜಕ್ಕಾಗಿ ರೈತರು ಅಲೆದಾಡುತ್ತಲೇ ಇದ್ದಾರೆ. ಆದರೆ ಬಿತ್ತನೆ ಬೀಜ ಮಾತ್ರ ಸಿಗುತ್ತಿಲ್ಲ. ಬೀಜಕ್ಕಾಗಿ ಗುಂಪು ಸೇರಿ ಪೊಲೀಸರ ಲಾಠಿ ಏಟು ತಿಂದಿದ್ದು ಆಯ್ತು, ಹೀಗಿದ್ದರೂ ಬೀಜ ಮಾತ್ರ ಇದುವರೆಗೆ ಸಿಕ್ಕಿಲ್ಲ. ಇತ್ತ ಅಧಿಕಾರಿಗಳು ಸೋಮವಾರ ಮೆಣಸಿನಕಾಯಿ ಬೀಜ ವಿತರಣೆ ಮಾಡುವುದಾಗಿ ಹೇಳಿದ್ದರಿಂದ ಬೆಳಗಿನ ಜಾವದಿಂದಲೇ ರೈತರು ತೋಟಗಾರಿಕೆ ಇಲಾಖೆ ಮುಂಭಾಗ ಜಮಾಯಿಸಿದ್ದರು. ಆದರೆ ಇವತ್ತು ಕೂಡ ಬಿತ್ತನೆ ಬೀಜ ಸಿಗೆ ರೈತರು ಪರದಾಡುವಂತಾಗಿದೆ.
ಬಳ್ಳಾರಿ ಜಿಲ್ಲೆಯ ರೈತರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ. ಕಳೆದ ವಾರ ಸಿಜೆಂಟಾ ಕಂಪನಿಯ ಮೆಣಸಿನಕಾಯಿಯ 120 ಕೆಜಿ ಬೀಜವನ್ನು ವಿತರಣೆ ಮಾಡಿದ ಅಧಿಕಾರಿಗಳು ಸ್ಟಾಕ್ ಬಂದ್ಮೇಲೆ ಇನ್ನುಳಿದ ಬೀಜ ವಿತರಣೆ ಮಾಡುವುದಾಗಿ ಹೇಳಿದ್ದಾರೆ. ಅದರಂತೆ ಅಧಿಕಾರಿಗಳು ಜೂನ್ 21 ರಂದು ಮತ್ತೆ ಮೆಣಸಿನಕಾಯಿ ಬೀಜ ವಿತರಣೆ ಮಾಡುವುದಾಗಿದೆ ತಿಳಿಸಿದ್ದಾರೆ. ಆದರೆ ಇವತ್ತು ಮತ್ತೆ ಬೀಜ ನೀಡದೆ ಸತಾಯಿಸುತ್ತಿದ್ದಾರೆ ಎಂದು ರೈತ ಯರಿಸ್ವಾಮಿ ತಿಳಿಸಿದ್ದಾರೆ.
ಜೂನ್ 21 ರಂದು ಕೂಡ ರೈತರು ಸೇರಿದಂತೆ ಮಹಿಳೆಯರು ಮೆಣಸಿನಕಾಯಿ ಬೀಜಕ್ಕಾಗಿ ಬಳ್ಳಾರಿಯ ತೋಟಗಾರಿಕೆ ಕಚೇರಿ ಎದುರು ಬೆಳಿಗ್ಗೆ 3 ಗಂಟೆಯಿಂದ ಕಾದರು ಯಾವುದೇ ಪ್ರಯೋಜನವಾಗಿಲ್ಲ. ಬೆಳಿಗ್ಗೆ 11 ಗಂಟೆಯಾದರೂ ಅಧಿಕಾರಿಗಳು ಬರದ ಹಿನ್ನೆಲೆ ರೈತರು ಆಕ್ರೋಶಗೊಂಡಿದ್ದರಿಂದ ಕೆಲಕಾಲ ಇಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಈ ವೇಳೆ ರೈತರು ತೋಟಗಾರಿಕೆ ಕಚೇರಿಯ ಗೇಟ್ ತೆಗೆದು ಒಳಗಡೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಿಜೆಂಟಾ ಕಂಪನಿಯ ವಿತರಕರು ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತಿಯೇ ಸ್ಥಳಕ್ಕೆ ತೋಟಗಾರಿಕೆ, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಜೆಂಟಾ ಕಂಪನಿಯ ವಿತರಕರು ರೈತರ ಬಳಿ ಆಗಮಿಸಿ ಬೀಜದ ಕೊರತೆಯಿಂದ ಅಭಾವವಾಗಿದ್ದು, ಇನ್ನು ಒಂದು ದಿನದಲ್ಲಿ 110 ಕೆಜಿ ಬೀಜವನ್ನು ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ವಿತರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಆದರೆ ಸಿಜೆಂಟಾ ಕಂಪನಿ ವಿತರಣೆ ಮಾಡುವ ಈ ಬೀಜ ರೈತರಿಗೆ ಸಾಕಾಗುವುದಿಲ್ಲ. ಹೀಗಾಗಿ ರೈತರು ಬೇರೆ ತಳಿಯ ಮೆಣಸಿನಕಾಯಿ ಬೀಜಗಳನ್ನು ಪಡೆಯಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಶರಣಪ್ಪ ಭೋಗಿ ತಿಳಿಸಿದ್ದಾರೆ.
ಸಿಜೆಂಟಾ ಕಂಪನಿ ಈಗಾಗಲೇ ಡೀಲರ್ಗಳಿಗೆ ಮೆಣಸಿನಕಾಯಿ ಬೀಜ ಮಾರಾಟ ಮಾಡಿದ್ದರಿಂದ ಬೀಜದ ಅಭಾವ ಸೃಷ್ಟಿಯಾಗಲು ಕಾರಣವಾಗಿದೆ. ಇನ್ನೂ ಈ ವರ್ಷ ಹೆಚ್ಚಿನ ಪ್ರಮಾಣದ ರೈತರು ಮೆಣಸಿನಕಾಯಿ ಬೆಳೆಯಲು ಮುಂದಾಗಿದ್ದಾರೆ. ಇದರಿಂದಾಗಿ ಸಿಜೆಂಟಾ ಕಂಪನಿಯ ಮೆಣಸಿನಕಾಯಿ ಬೀಜಕ್ಕೆ ಭಾರಿ ಬೇಡಿಕೆಗೆ ಕಾರಣವಾಗಿದೆ. ಇನ್ನಾದರೂ ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ ಸಿಗಲಿ ಎನ್ನುವುದು ನಮ್ಮ ಆಶಯ.
(ಮಾಹಿತಿ ಕೃಪೆ tv9kannad)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ