ರಾಜ್ಯ ರಾಜಕೀಯದಲ್ಲಿ ಪ್ರಭಾವಿ ನಾಯಕ ಹಾಗೂ ಕುಂದಾನಗರಿ ಸಾಹುಕಾರ್ ಸತೀಶ್ ಜಾರಕಿಹೊಳಿ ಪುತ್ರಿಯಾಗಿರುವ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಎಂಗೇಜ್ ಆಗಿದ್ದಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಯುವ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ವಿವಾಹ ನಿಶ್ಚಿತಾರ್ಥವು ಬೆಳಗಾವಿಯಲ್ಲಿ ಸರಳ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿದೆ.
ಬಿಸಿಲುನಾಡಿನ ನಿವೃತ್ತ ಆರ್‌ಟಿಒ ಪುತ್ರ ಹಾಗೂ ಸಿಎ ಗೌತಮ್ ಪಾಟೀಲ್ ಅವರೊಂದಿಗೆ ಮದುವೆ ನಿಶ್ಚಯವಾಗಿದೆ. ಹಾಗಾದ್ರೆ ಪ್ರಿಯಾಂಕಾ ಅವರ ಕೈ ಹಿಡಿಯುತ್ತಿರುವ ಗೌತಮ್ ಯಾರು ಹಿನ್ನೆಲೆ ಏನು? ಏನ್ ಮಾಡ್ತಿದ್ದಾರೆ ಅನ್ನೋದನ್ನು ಹೇಳ್ತಿವಿ ನೋಡಿ.
ಪ್ರಿಯಾಂಕಾ ಜಾರಕಿಹೊಳಿ ಅವರ ಕೈಹಿಡಿಯಲಿರುವ ಭಾವಿ ವರನ ಹೆಸರು ಗೌತಮ್ ಪಾಟೀಲ್. ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿರುವ ಗೌತಮ್, ರಾಯಚೂರು ಜಿಲ್ಲೆಯ ದೇವದುರ್ಗ ಮೂಲದವರು. ಗೌತಮ್ ಅವರ ತಂದೆ ನಿವೃತ್ತ ಆರ್‌ಟಿಒ ಅಧಿಕಾರಿಯಾಗಿದ್ದು, ಸದ್ಯ ಇವರ ಕುಟುಂಬ ಉನ್ನತ ಹಿನ್ನೆಲೆಯನ್ನು ಹೊಂದಿದೆ. ಇನ್ನೂ ವರನ ಕುಟುಂದ ಹೆಚ್ಚಿನ ಮಾಹಿತಿಯನ್ನು ಜಾರಕಿಹೊಳಿ ಕುಟುಂಬ ಬಹಿರಂಗಪಡಿಸಿಲ್ಲ.
ರಾಜಕೀಯವಾಗಿ ಜಾರಕಿಹೊಳಿ ಸಹೋದರರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಮನೆಯ ಶುಭ ಸಮಾರಂಭಕ್ಕಾಗಿ ಎಲ್ಲ ಸಹೋದರರು ಒಟ್ಟಾಗಿ ಸೇರಿದ್ದು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ನಿಶ್ಚಿತಾರ್ಥ ಸಮಾರಂಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಪ್ರಿಯಾಂಕಾ ಅವರ ಸಹೋದರ ರಾಹುಲ್ ಜಾರಕಿಹೊಳಿ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಭಾವಿ ದಂಪತಿಗೆ ಶುಭ ಹಾರೈಸಿದರು.
ಇನ್ನು, ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ದೇಶದ ಅತಿ ಕಿರಿಯ ಸಂಸದೆಯರಲ್ಲಿ ಒಬ್ಬರಾಗಿ ಪ್ರಿಯಾಂಕಾ ಜಾರಕಿಹೊಳಿ ಸಂಸತ್ ಪ್ರವೇಶಿಸಿದ್ದರು. ತಮ್ಮ ಸರಳತೆ ಮತ್ತು ಅಭಿವೃದ್ಧಿ ಪರ ಚಿಂತನೆಗಳಿಂದ ಗುರುತಿಸಿಕೊಂಡಿರುವ ಪ್ರಿಯಾಂಕಾ, ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆಯ ದಿನಾಂಕ ಹಾಗೂ ಹೆಚ್ಚಿನ ವಿವರಗಳನ್ನು ಕುಟುಂಬದ ಮೂಲಗಳು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.

No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ