ಅಡೂರು: ಕೇರಳದ ಪತ್ತನಂತಿಟ್ಟ ವಡಸ್ಸೇರಿಕ್ಕರ ಗ್ರಾಮದಲ್ಲಿ 54ರ ಮಹಿಳೆ ಅವಳಿ ಮಕ್ಕಳ ತಾಯಿ ಆದುದೇ ಈಗ ಸುದ್ದಿ. ಮಹಿಳೆಯ ಹೆಸರು ಕುಮಾರಿ. ಆಕೆಯ ಪತಿಯ ಹೆಸರು ಶ್ರೀಧರನ್. ಅವರ ವಯಸ್ಸು 64 ವರ್ಷ. ಈ ವಯಸ್ಸಿನಲ್ಲೂ ಮಕ್ಕಳಾಗುತ್ತಾ ಎಂಬ ಪ್ರಶ್ನೆಯೇ ಆ ಊರಿನ ಬಹುತೇಕರನ್ನು ಕಾಡುತ್ತಿದೆ. ಇದೊಂದು ಅಚ್ಚರಿ ಕೂಡ ಹೌದು ಎನ್ನುತ್ತಾರೆ ಊರವರಷ್ಟೇ ಅಲ್ಲ, ವೈದ್ಯರು ಕೂಡ.ಅವಳಿ ಮಕ್ಕಳಿಗೆ ಜನ್ಮ ನೀಡಿರುವುದು ಖುಷಿಯೇ ಆದರೂ, ಅವರನ್ನು ಅತಿಯಾಗಿ ಕಾಡುತ್ತಿರುವ ನೋವು ಒಂದಿದೆ. ಅದನ್ನು ಕುಮಾರಿ ಹೇಳಿಕೊಂಡಿರುವುದು ಹೀಗೆ- ಪತ್ತನಂತಿಟ್ಟ ಜಿಲ್ಲೆಯ ವಡಸ್ಸೇರಿಕ್ಕರ ಗ್ರಾಮ ಪಂಚಾಯಿತಿ ಮಣಿಯರ ಎಂಬ ವಾರ್ಡ್ನ ನಿವಾಸಿಗಳು ನಾವು.ನಮಗೆ ಮದುವೆಯಾಗಿ 29 ವರ್ಷ ಆಯಿತು. ಮದುವೆಯಾಗಿ ಐದು ವರ್ಷದ ಬಳಿಕ ಒಬ್ಬ ಮಗ ಜನಿಸಿದ್ದ. ಅವನಿಗೆ 23 ವರ್ಷ ಆಗುವ ತನಕ ಎಲ್ಲವೂ ಚೆನ್ನಾಗೇ ಇತ್ತು. ಅದೊಂದು ದಿನ ಆತ ನಮ್ಮನ್ನು ಬಿಟ್ಟು ಅಗಲಿ ಹೋದ. ಆ ನೋವು ನಮ್ಮನ್ನೂ ಇನ್ನೂ ಕಾಡುತ್ತಿದೆ. ಬೇರೆ ಮಕ್ಕಳಲಿಲ್ಲದ ನಮಗೆ ಸ್ನೇಹಿತರು, ಹಿತೈಷಿಗಳು ಸಾಂತ್ವನ ಹೇಳುತ್ತಿದ್ದರು. ಈ ದುರಂತವಾಗಿ ಐದಾರು ತಿಂಗಳು ಆಗಿರಬಹುದು. ಈ ವಯಸ್ಸಲ್ಲೂ ನಿಮಗೆ ಮಕ್ಕಳಾಗುವ ಸಾಧ್ಯತೆ ಇದೆ ಎಂದು ಒಬ್ಬರು ಹೇಳಿದ್ರು. ಆ ಮಾತು ನಮ್ಮಲ್ಲಿ ಮಕ್ಕಳ ಕುರಿತ ಆಸೆ ಮತ್ತೊಮ್ಮೆ ಚಿಗುರುವಂತಾಯಿತು.ಹಾಗೆ ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಬಂದು ಡಾಕ್ಟರ್ ಬಳಿ ಎಲ್ಲವನ್ನೂ ವಿವರವಾಗಿ ತಿಳಿಸಿದೆವು. ನಮ್ಮ ವಯಸ್ಸಿನ ವಿಚಾರವನ್ನೂ ಹೇಳಿದೆವು. ಕೆಲವೊಂದು ಪರೀಕ್ಷೆಗಳನ್ನು ನಡೆಸಿದ ಅವರು ಮಕ್ಕಳಾಗುವ ಭರವಸೆ ನೀಡಿದರು. ಡಾ. ಸಿರಿಯಾಕ್ ಪಾಪಚ್ಚನ್ , ಡಾ. ಬಿ. ಪ್ರಸನ್ನಕುಮಾರಿ, ಡಾ.ಜೆಸ್ನಾ ಹಸನ್, ಡಾ.ಶ್ರೀಜಾ ಪಿ.ವರ್ಘೀಸ್ ಅವರ ತಂಡದ ಚಿಕಿತ್ಸೆಯಂತೆ ಮೂರುವಾರಗಳ ಬಳಿಕ ನಾನು ಗರ್ಭ ಧರಿಸಿದೆ. ನಿಯತವಾದ ಚೆಕ್ಅಪ್ ಮತ್ತು ಆರೈಕೆಯ ಬಳಿಕ ಒಂದಲ್ಲ ಎರಡು ಮಕ್ಕಳಿಗೆ ಜನ್ಮ ನೀಡಿದ್ದೇನೆ. ಅವಳಿ ಮಕ್ಕಳ ಪೈಕಿ ಒಂದು ಗಂಡು, ಇನ್ನೊಂದು ಹೆಣ್ಣು. ಆ ಭಗವಂತ ಒಬ್ಬ ಮಗನನ್ನು ಕೊಟ್ಟು ಹಿಂಪಡೆದುಕೊಂಡ. ಬಳಿಕ ಈ ವಯಸ್ಸಿನಲ್ಲೂ ನಮಗೆ ಎರಡು ಮಕ್ಕಳನ್ನು ಕೊಟ್ಟು ಹರಸಿದ್ದಾನೆ ಎಂದು ಭಾವುಕರಾಗಿದ್ದಾರೆ. (ಏಜೆನ್ಸೀಸ್)
(ಮಾಹಿತಿ ಕೃಪೆ ವಿಜಯವಾಣಿ...)
(ಮಾಹಿತಿ ಕೃಪೆ ವಿಜಯವಾಣಿ...)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ