ಬಳ್ಳಾರಿ: ಮದುವೆಗೆ ಬನ್ನಿ ಎಂದು ಆಮಂತ್ರಣ ಪತ್ರಿಕೆ ಕೊಟ್ಟು ಆಹ್ವಾನಿಸೋದು ಮಾಮೂಲು. ಆದರೆ ಕೋವಿಡ್ ಎಂಬ ಮಹಾಮಾರಿ ಮದುವೆ ಖುಷಿ, ಆಮಂತ್ರಣ ಪತ್ರಿಕೆಯ ಆಹ್ವಾನ ಎಲ್ಲದಕ್ಕೂ ಬ್ರೇಕ್ ಹಾಕಿದೆ. ಆದರೆ, ಲಾಕ್‌ಡೌನ್ ಅವಧಿಯಲ್ಲೇ ಮದುವೆಗೆ ಸಿದ್ಧವಾಗಿರುವ ಹೊಸಪೇಟೆಯ ಮದುಮಗನೊಬ್ಬ ವಾಟ್ಸ್‌ಆಯಪ್ ಆಮಂತ್ರಣ ಪತ್ರಿಕೆಯಲ್ಲಿ ಮದುವೆಗೆ ಬರದಂತೆ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಹೊಸಪೇಟೆಯ ಚಿರಂಜೀವಿ ಕರಣಂ ಎನ್ನುವವರು ಮೇ 10 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ವಿಭಿನ್ನ ರೀತಿಯಲ್ಲಿ ಆಮಂತ್ರಣ ಪತ್ರಿಕೆ ರೂಪಿಸಿ ವಾಟ್ಸ್‌ಆಯಪ್ ಮೂಲಕ ಆಹ್ವಾನ ನೀಡುತ್ತಿದ್ದಾರೆ.
ಹೇಗಿದೆ ವಾಟ್ಸ್‌ಆಯಪ್ ಓಲೆ?: “ಸರಸ್ವತಿ ಎನ್ನುವವರೊಂದಿಗೆ ನನ್ನ ವಿವಾಹ ನಡೆಯಲಿದೆ. ಈ ವಿಷಯವನ್ನು ತಮ್ಮ “ಮಾಹಿತಿಗಾಗಿ’ ತಿಳಿಸುವುದಕ್ಕೆ ನನ್ನ ಮನಸ್ಸು ನಿರಾಕರಿಸುತ್ತಿದೆ.ಕೋವಿಡ್ ಹಿನ್ನೆಲೆಯಲ್ಲಿ ನನ್ನ ಬಂಧು- ಬಾಂಧವರನ್ನು ಮತ್ತು ಆತ್ಮೀಯರನ್ನು ಆಹ್ವಾನಿಸುವುದು ಕಷ್ಟಸಾಧ್ಯವಾಗುತ್ತಿದೆ. ಕ್ಷಮೆ ಇರಲಿ. ತಾವೆಲ್ಲ ಪರಿಸ್ಥಿತಿಯನ್ನು ಅರಿತುಕೊಂಡು ಮೇ 10 ರಂದು ಭಾನುವಾರ ನಡೆಯಲಿರುವ ನನ್ನ ಮದುವೆಗೆ ತಾವೆಲ್ಲರೂ ತಮ್ಮ ಮನೆಯಿಂದಲೇ ಆಶೀರ್ವದಿಸಬೇಕು ಎಂದು ತುಂಬು ಹೃದಯದಿಂದ ವಿನಂತಿಸುತ್ತೇನೆ. ಮುಂದಿನ ದಿನಗಳಲ್ಲಿ ನಾವೇ ತಮ್ಮ ಮನೆಗಳಿಗೆ ಆಗಮಿಸಿ ತಮ್ಮ ಆಶೀರ್ವಾದ ಪಡೆಯುತ್ತೇವೆ’ ಎಂದವರು ಕೋರಿದ್ದಾರೆ. ಜತೆಗೆ ಮನೆಯಲ್ಲೇ ಇರಿ, ಮಾಸ್ಕ್ ಧರಿಸಿ ಸಂಚರಿಸಿ, ಕೋವಿಡ್ ಓಡಿಸಿ ಎಂಬ ಸಂದೇಶದ ಜತೆಗೆ ಕೋವಿಡ್ ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
(ಮಾಹಿತಿ ಕೃಪೆ ಉದಯವಾಣಿ 9/05/2020)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ