ವಿಜಯನಗರ (ಹೊಸಪೇಟೆ): ಪ್ರತಿ ಸಲ ರಾಜ್ಯ ಬಜೆಟ್‌ಗೆ ದಿನಗಳು ಸಮೀಪಿಸುತ್ತಿರುವಂತೆ ಸಹಜವಾಗಿಯೇ ಆಯಾ ಊರಿನವರ ನಿರೀಕ್ಷೆಗಳು ಹೆಚ್ಚಾಗುತ್ತವೆ. ಅದರಲ್ಲೂ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯ ಜನರ ಪಾಲಿಗೆ ಈ ಸಾಲಿನ ಆಯವ್ಯಯ ಮಹತ್ವದ್ದು.
ಜಿಲ್ಲಾಡಳಿತ ಭವನ ನಿರ್ಮಾಣ, ಜಿಲ್ಲಾಮಟ್ಟದ ಕಚೇರಿಗಳ ಸ್ಥಾಪನೆ, ಹೊಸ ಸಿಬ್ಬಂದಿ ನೇಮಕಾತಿ, ಅಧಿಕಾರಿಗಳ ಓಡಾಟಕ್ಕೆ ವಾಹನಗಳ ಖರೀದಿ, ರಸ್ತೆ ನಿರ್ಮಾಣ ಹೀಗೆ ಹತ್ತು ಹಲವು ಕೆಲಸಕ್ಕಾಗಿ ಅನುದಾನದ ಅಗತ್ಯ ಇರುತ್ತದೆ. ಒಂದರ್ಥದಲ್ಲಿ ಈಗಿರುವ ನಗರದ ಮರು ನಿರ್ಮಾಣ ಎಂದೇ ಹೇಳಬಹುದು.
ಇದರ ಜೊತೆಯಲ್ಲಿ ಜಿಲ್ಲೆ ವ್ಯಾಪ್ತಿಯ ತಾಲ್ಲೂಕುಗಳ ದಶಕಗಳ ಬೇಡಿಕೆಗಳಿಗೂ ಬಜೆಟ್‌ನಲ್ಲಿ ಮನ್ನಣೆ ಸಿಗಬಹುದೇ ಎಂಬ ಪ್ರಶ್ನೆಯೂ ಜನರನ್ನು ಕಾಡುತ್ತಿದೆ. ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ ತಾಲ್ಲೂಕುಗಳಲ್ಲಿ ಕೆರೆ, ಕಟ್ಟೆ ತುಂಬಿಸಬೇಕು. ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕು ಎನ್ನುವುದು ಅನೇಕ ವರ್ಷಗಳ ಬೇಡಿಕೆಯಾಗಿದೆ. ಅದೇ ರೀತಿ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿಯ ಕೆಲವು ಭಾಗಗಳಲ್ಲಿ ನೀರಾವರಿ ಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಗಳು ಪ್ರಗತಿಯಲ್ಲಿವೆ. ಆದರೆ, ಎರಡೂ ತಾಲ್ಲೂಕಿನ ಅರ್ಧ ಭಾಗ ಈಗಲೂ ಮಳೆಯನ್ನೇ ಅವಲಂಬಿಸಿದೆ.
ಜಿಲ್ಲಾ ಕೇಂದ್ರ ಹೊಸಪೇಟೆ ಸೇರಿದಂತೆ ಇತರೆ ತಾಲ್ಲೂಕುಗಳಲ್ಲಿ ವಲಸೆ ಹೆಚ್ಚಿನ ಪ್ರಮಾಣದಲ್ಲಿ. ಅದರಲ್ಲೂ ತಾಂಡಾ ನಿವಾಸಿಗಳು ಉದ್ಯೋಗ ಅರಸಿಕೊಂಡು ಬೇರೆಡೆ ಗುಳೇ ಹೋಗುತ್ತಾರೆ. ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದ ನಂತರ ಸ್ವಲ್ಪ ಪ್ರಮಾಣದಲ್ಲಿ ವಲಸೆ ತಡೆಯಲು ಯಶಸ್ವಿಯಾಗಿದೆ. ಆದರೆ, ಇನ್ನೂ ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಸ್ಥಳೀಯ ಬಹುತೇಕರಲ್ಲಿ ಕೌಶಲ ಇಲ್ಲ. ಕೈಗಾರಿಕೆಗಳಿದ್ದರೂ ಹೊರಗಿನವರು ಅಲ್ಲಿ ಆಕ್ರಮಿಸಿಕೊಂಡಿದ್ದಾರೆ.
'ವಿಜಯನಗರ ಜಿಲ್ಲೆ ಮಾಡಿರುವುದರಿಂದ ಜಿಲ್ಲಾ ಕೇಂದ್ರದ ಅಂತರ ತಗ್ಗಿರುವುದು ಒಳ್ಳೆಯ ವಿಷಯ. ನಮ್ಮ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನರಿಗೆ ಕೃಷಿ ಬಿಟ್ಟರೆ ಬೇರೆ ಉದ್ಯೋಗಗಳಿಲ್ಲ. ನೀರಿನ ಸಮಸ್ಯೆ ಬಗೆಹರಿಸಬೇಕು. ಕೈಗಾರಿಕೆಗಳನ್ನು ಸ್ಥಾಪಿಸಿ, ಜನರಿಗೆ ಉದ್ಯೋಗ ಕೊಡಬೇಕು' ಎನ್ನುತ್ತಾರೆ ಕೊಟ್ಟೂರಿನ ಯುವಕರಾದ ಬಸವರಾಜ, ಮಲ್ಲಿಕಾರ್ಜುನ.
ಹಂಪಿಯಲ್ಲಿ ಮೂಲಸೌಕರ್ಯಕ್ಕೆ ಸಿಕ್ಕಿತ್ತೇ ಹಣ?:
ವಿಶ್ವಪ್ರಸಿದ್ಧ ಹಂಪಿಯಲ್ಲಿ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎನ್ನುವುದು ದಶಕಗಳ ಬೇಡಿಕೆಯಾಗಿದೆ. ಆದರೆ, ಅದು ಈಡೇರಿಲ್ಲ. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರಿಗೆ ನದಿ ತಟದಲ್ಲಿ ಸ್ನಾನಗೃಹ, ಶೌಚಾಲಯ, ಕಡಿಮೆ ದರದಲ್ಲಿ ಕೊಠಡಿ ಬಾಡಿಗೆ ಸೌಲಭ್ಯ ಇನ್ನೂ ಮರೀಚಿಕೆಯಾಗಿದೆ.
ಹಿಂದಿನ ಬಜೆಟ್ ಅನುದಾನವೇ ಸಿಕ್ಕಿಲ್ಲ:
ಹಂಪಿ ಮಾತಂಗ ಬೆಟ್ಟದ ಅಭಿವೃದ್ಧಿ ಕಾರ್ಯಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ₹1 ಕೋಟಿ ಮೀಸಲಿಡಲಾಗಿತ್ತು. ಎರಡು ವರ್ಷಗಳಾದರೂ ಆ ಹಣ ಬಿಡುಗಡೆಯಾಗಿಲ್ಲ.
'ಮಾತಂಗ ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಘೋಷಿಸಿದ ಹಣ ಬಿಡುಗಡೆಯಾಗದೇ ಇರುವುದು ಬೇಸರ ಮೂಡಿಸಿದೆ. ನೆರೆ ನೆಪವೊಡ್ಡಿ ಆ ವರ್ಷ ಸಮ್ಮಿಶ್ರ ಸರ್ಕಾರ ಅನುದಾನ ನೀಡಿರಲಿಲ್ಲ. ಈ ವರ್ಷವಾದರೂ ಸರ್ಕಾರ ಅದಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಹುಸಿ ಭರವಸೆಗಳನ್ನು ಕೊಡಬಾರದು' ಎಂದು ಮಾತಂಗ ಸಮಾಜದ ಮುಖಂಡ ನಿಂಬಗಲ್ ರಾಮಕೃಷ್ಣ ಹೇಳಿದರು.
(ಮಾಹಿತಿ ಕೃಪೆ ಪ್ರಜಾವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ