ಬೆಂಗಳೂರು: ಕೇಂದ್ರ ಸರ್ಕಾರ ಕೋವಿಡ್-19 ಸಂಕಷ್ಟದಿಂದ ಜನರನ್ನು ಪಾರು ಮಾಡಲು ಘೋಷಿಸಿರುವ 20 ಲಕ್ಷ ಕೋಟಿ ಪರಿಹಾರ ಯಾರಿಗೂ ಪ್ರಯೋಜನಕ್ಕೆ ಬರದಂತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ವಲಸೆ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಹಾಕುವುದರಿಂದ ಅವರಿಗೆ ಸಹಾಯವಾದಂತಾಗುತ್ತದೆ. ಮುಂದಿನ ಆರು ತಿಂಗಳುಗಳ ಕಾಲ ಪ್ರತಿ ತಿಂಗಳು 10 ಸಾವಿರ ರು.ಗಳನ್ನು ವಲಸೆ ಕಾರ್ಮಿಕರಿಗೆ ನೇರವಾಗಿ ನೀಡಿ ಎಂದು ಸಲಹೆ ಕೊಟ್ಟಿದ್ದಾರೆ.
ಇದರಿಂದ ವಲಸೆ ಕಾರ್ಮಿಕರು ಅಗತ್ಯ ವಸ್ತುಗಳನ್ನು ಖರೀದಿಸಲು ಸಹಾಯವಾಗುವುದಲ್ಲದೇ ಆರ್ಥಿಕತೆಗೆ ಉತ್ತೇಜನವೂ ದೊರೆಯಲಿದೆ ಎಂದು ಹೇಳಿದ್ದಾರೆ. ವಲಸೆ ಕಾರ್ಮಿಕರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಅವರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವಂತೆ ದೇಶದ ಪ್ರಮುಖ ಉದ್ಯಮಿಗಳು ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದ್ದಾರೆ,
''ಹಣಕಾಸು ಸಚಿವಾಲಯ ಸಿದ್ಧತೆಯೇ ಇಲ್ಲದೆ ಪ್ರಧಾನಿ ಪ್ರಚಾರಕ್ಕಾಗಿ ಪ್ಯಾಕೇಜ್ ಘೋಷಿಸಿದರು. ವಲಸೆ ಕಾರ್ಮಿಕರ ಸ್ಥಿತಿ ಶೋಚನೀಯ ಸ್ಥಿತಿ ತಲುಪಿದರೂ ಸರಕಾರ ಸ್ಪಂದಿಸಲಿಲ್ಲ. ನೂರಾರು ಕಿ.ಮೀ. ನಡೆದೇ ಕಾರ್ಮಿಕರು ಊರು ತಲುಪಬೇಕಾಯಿತು, ಲಾಕ್ ಡೌನ್ ಘೋಷಿಸುವ ಮೊದಲು ವಲಸೆ ಕಾರ್ಮಿಕರು ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಅವಕಾಶ ನೀಡಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಗಳಿಗೆ ಡಿಸೆಂಬರ್, ಜನವರಿ ತಿಂಗಳ ಜಿಎಸ್‌ಟಿ ಪರಿಹಾರದ ಸುಮಾರು 34 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಕೊರೊನಾ ನೆಪದಲ್ಲಿ ಸುಧಾರಣೆ ಕಾರಣ ನೀಡಿ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಕೇಂದ್ರ ಸರಕಾರ ತೊಡಗಿದೆ,'' ಎಂದು ಖರ್ಗೆ ಕಿಡಿಕಾರಿದ್ದಾರೆ.
ಕೇಂದ್ರದ ಆರ್ಥಿಕ ಪರಿಹಾರ ರೈತರಿಗೆ ತಕ್ಷಣಕ್ಕೆ ಅನುಕೂಲಕ್ಕೆ ಬರುವಂತಾಗಿದ್ದರೆ ಆಹಾರ ಉತ್ಪಾದನೆ ಹೆಚ್ಚಳಕ್ಕೆ ಅನುಕೂಲವಾಗುತ್ತಿತ್ತು. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡುವ 2 ಸಾವಿರ ರೂ. ಯಾವುದಕ್ಕೂ ಪ್ರಯೋಜನ ಬರುವುದಿಲ್ಲ ಎಂದು ಖರ್ಗೆ ಆರೋಪಿಸಿದ್ದಾರೆ.
ಅಲ್ಲದೆ ಕೇಂದ್ರ ಸರ್ಕಾರ ನರೆಗಾ ಯೋಜನೆಗೆ ನೀಡಿರುವ 40 ಸಾವಿರ ಕೋಟಿ ಹೆಚ್ಚುವರಿ ಪರಿಹಾರ 10 ಕೃಷಿ ಕಾರ್ಮಿಕರ ಜೊತೆಗೆ 8 ಕೋಟಿ ವಲಸೆ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಕಾರ್ಮಿಕರಿಗೆ ಕನಿಷ್ಟ 20 ದಿನ ಮಾತ್ರ ಉದ್ಯೋಗ ನೀಡಬಹುದು ಎಂದು ಖರ್ಗೆ ಹೇಳಿದ್ದಾರೆ.
(ಮಾಹಿತಿ ಕೃಪೆ ಕನ್ನಡಪ್ರಭ...)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ