ಮೆಡಕ್ : ಪಾಳುಬಿದ್ದ ಕೊಳವೆ ಬಾವಿಗೆ ಪುಟ್ಟ ಮಕ್ಕಳು ಬಿದ್ದು ಸಾಯುವ ಪ್ರಕರಣ ಕೊನೆಯಾಗುತ್ತಲೇ ಇಲ್ಲ. ತೆಲಂಗಾಣ ರಾಜ್ಯದ ಮೆಡಕ್ ಜಿಲ್ಲೆಯ ಪಪನ್ನಪೆಟ್ ಮಂಡಲ್ ಸಮೀಪ ಪೊಡ್ಚನಂಪಲ್ಲಿ ಗ್ರಾಮದಲ್ಲಿ ಆಟವಾಡುತ್ತಿದ್ದ 3 ವರ್ಷದ ಮಗು ಕಾಲು ಜಾರಿ 120 ಅಡಿ ಆಳದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದು ಇಂದು ಬೆಳಗ್ಗೆ ಮೃತದೇಹವನ್ನು ಹೊರತೆಗೆಯಲಾಗಿದೆ.
ನಡೆದಿದ್ದೇನು: ಗ್ರಾಮದ ಗದ್ದೆಯಲ್ಲಿ ಇತ್ತೀಚೆಗೆ ಕೊಳವೆ ಬಾವಿ ಕೊರೆಸಲಾಗಿತ್ತು. ನೀರು ಸಿಗದಿದ್ದಾಗ ಅದನ್ನು ಮುಚ್ಚದೆ ಹಾಗೆಯೇ ಬಿಡಲಾಗಿತ್ತು. ಗದ್ದೆ ಪಕ್ಕದ ಮನೆಯೊಂದರಲ್ಲಿ 3 ವರ್ಷದ ಬಾಲಕ ಸಾಯಿ ವರ್ಧನ್ ತನ್ನ ತಂದೆ ಮಂಗಲಿ ಭಿಕ್ಷಪತಿ ಮತ್ತು ತಾಯಿ ನವೀನಾ ಜೊತೆ ಗದ್ದೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು.
ನಿನ್ನೆ ಸಾಯಂಕಾಲ 5 ಗಂಟೆ ಹೊತ್ತಿಗೆ ದಂಪತಿ ಮಗುವಿನೊಂದಿಗೆ ಹೊರಗೆ ಹೋಗಲು ನಡೆದುಕೊಂಡು ಹೋಗುತ್ತಿದ್ದಾಗ ಮಗು ಜಾರಿ ತೆರೆದ ಕೊಳವೆ ಬಾವಿಗೆ ಬಿದ್ದಿದೆ.
ಕೂಡಲೇ ತಾಯಿ ನವೀನ ತಾನು ಉಟ್ಟಿದ್ದ ಸೀರೆಯನ್ನು ಕಳಚಿ ಕೊಳವೆ ಬಾವಿಯೊಳಗೆ ಇಳಿಸಿ ಮಗು ಅದನ್ನು ಹಿಡಿದುಕೊಂಡು ಮೇಲೆ ಬರಬಹುದು ಎಂದು ಪ್ರಯತ್ನಪಟ್ಟಳು. ಆದರೆ ಸಾಧ್ಯವಾಗಲಿಲ್ಲ. ಮಗು ಆಗಲೇ ಬಾವಿಯೊಳಗೆ ಬಹಳ ಆಳದವರೆಗೆ ಹೋಗಿದ್ದು ಸೀರೆಯನ್ನು ಹಿಡಿದು ಎಳೆಯಲು ಸಾಧ್ಯವಾಗಲಿಲ್ಲ. 17 ಅಡಿ ಆಳಕ್ಕೆ ಮಗು ಆಗಲೇ ಜಾರಿ ಬಿದ್ದು ಹೋಗಿತ್ತು.
ಜಿಲ್ಲಾಡಳಿತಕ್ಕೆ ಗ್ರಾಮಸ್ಥರು ವಿಷಯ ತಲುಪಿಸಿದರು. ಕೂಡಲೇ ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ, ಜಿಲ್ಲಾಡಳಿತ ಪಕ್ಕದಲ್ಲಿ ಮಣ್ಣನ್ನು ಅಗೆದು ಕೊಳವೆ ಬಾವಿಯಿಂದ ಮಗುವನ್ನು ಸುರಕ್ಷಿತವಾಗಿ ತೆಗೆಯಲು ರಾತ್ರಿಯಿಡೀ ಪ್ರಯತ್ನಪಟ್ಟಿತ್ತು. ಆದರೆ ಆಮ್ಲಜನಕ ಸರಿಯಾಗಿ ಸಿಗದೆ ಮಗು ಮೃತಪಟ್ಟಿದ್ದು ಮೃತದೇಹವನ್ನು ಹೊರತೆಗೆಯಲಾಗಿದೆ.
ಮೆಡಕ್ ಜಿಲ್ಲಾಧಿಕಾರಿ ಕೆ ಧರ್ಮ ರೆಡ್ಡಿ ಪ್ರತಿಕ್ರಿಯೆ ನೀಡಿ, ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಗದ್ದೆಯಲ್ಲಿ ಅನುಮತಿ ಪಡೆಯದೆ ಮೂರು ಕೊಳವೆಬಾವಿಗಳನ್ನು ಕೊರೆದು ನೀರು ಸಿಗದೆ ಹಾಗೆಯೇ ಬಿಡಲಾಗಿದೆ. ಅಕ್ರಮವಾಗಿ ಕೊಳವೆ ಬಾವಿ ತೆಗೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
(ಮಾಹಿತಿ ಕೃಪೆ ಕನ್ನಡಪ್ರಭ....)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ