ಕಟಕ್: ದೇವರನ್ನು ಸಮಾಧಾನಪಡಿಸಿದರೆ, ಕೋವಿಡ್-19 ಸಂಕಷ್ಟವನ್ನು ನಿವಾರಿಸಬಹುದು ಎಂದು ಭಾವಿಸಿ ವ್ಯಕ್ತಿಯ ತಲೆ ಕತ್ತರಿಸಿರುವುದಾಗಿ ಇಲ್ಲಿನ ದೇವಾಲಯದ ಪೂಚಾರಿಯೊಬ್ಬ ಹೇಳಿಕೆ ನೀಡಿದ್ದಾನೆ. ಒಡಿಶಾದ ಕಟಕ್ ಜಿಲ್ಲೆಯ ನರಸಿಂಗಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬಂಧಹುಡ ಬಳಿಯ ಬಂಧಾ ಮಾ ಬುಧ ಬ್ರಾಹ್ಮಣಿ ದೇವಾಲದಲ್ಲಿ ಬುಧವಾರ ರಾತ್ರಿ ಈ ಕೃತ್ಯವೆಸಗಲಾಗಿದೆ.
ಪೂಜಾರಿಯನ್ನು ಸನ್ಸಾರಿ ಓಜಾ (72) ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಆತನೇ ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿ ಹೇಳಿಕೆ ಪ್ರಕಾರ, ಮೃತ ವ್ಯಕ್ತಿಯನ್ನು ಸರೋಜ್ ಕುಮಾರ್ ಪ್ರಧಾನ್ (52) ಎನ್ನಲಾಗಿದೆ. 'ಕೃತ್ಯಕ್ಕೂ ಮೊದಲು, ಪ್ರಧಾನ್ ಮತ್ತು ತನ್ನ ನಡುವೆ 'ಪ್ರಾಣ ತ್ಯಾಗ'ಕ್ಕೆ ಸಂಬಂಧಿಸಿದಂತೆ ವಾದ ನಡೆಯಿತು' ಎಂದು ಆತ ಹೇಳಿಕೆ ನೀಡಿದ್ದಾನೆ.
ವಾದವು ಮಿತಿಮೀರುತ್ತಿದ್ದಂತೆ, ಓಜಾ ಹರಿತವಾದ ಆಯುಧದಿಂದ ಪ್ರಧಾನ್ ಅವರ ತಲೆಗೆ ಹೊಡೆದಿದ್ದಾನೆ. ಹೀಗಾಗಿ ಪ್ರಧಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಚಾರಣೆ ವೇಳೆ ಪೂಜಾರಿಯು, 'ನನ್ನ ಕನಸಿನಲ್ಲಿ ದೇವರು ಬಂದು ಆದೇಶ ನೀಡಿದ್ದರಿಂದ ಕೊಲೆ ಮಾಡಿದೆ. 'ಮಾನವ ಪ್ರಾಣ ತ್ಯಾಗ'ದ ಬಳಿಕ ಕೊರೊನಾವೈರಸ್ ಸೋಂಕು ನಿವಾರಣೆಯಾಗುವುದನ್ನೂ ಅದೇ ಕನಸಿನಲ್ಲಿ ಕಂಡೆ' ಎಂದು ಹೇಳಿಕೆ ನೀಡಿದ್ದಾನೆ.
ಆದರೆ, ಗ್ರಾಮದಲ್ಲಿರುವ ಮಾವಿನ ತೋಟದ ವಿಚಾರವವಾಗಿ ಪೂಚಾರಿ ಮತ್ತು ಪ್ರಧಾನ್ ನಡುವೆ ಬಹುದಿನಗಳಿಂದ ವಿವಾದವಿತ್ತು ಎಂದು ಬಂಧಹುಡ ನಿವಾಸಿಗಳು ಹೇಳಿದ್ದಾರೆ.
ಕೊಲೆಗೆ ಬಳಸಲಾದ ಆಯುಧವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶವವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
'ಘಟನಾ ಸಂದರ್ಭ ಆರೋಪಿ ಅತಿಯಾಗಿ ಮದ್ಯ ಸೇವಿಸಿದ್ದ. ಮರುದಿನ ಬೆಳಿಗ್ಗೆ ತನ್ನ ತಪ್ಪಿನ ಅರಿವಾಗಿ ಆತ ಪೊಲೀಸರಿಗೆ ಶರಣಾಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ' ಎಂದು ಡಿಐಜಿ ಆಶಿಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸತ್ಯ ಪ್ರಕಾಶ್ ಪಾಟಿ ಎನ್ನುವವರು, '21ನೇ ಶತಮಾನದಲ್ಲಿಯೂ ಜನರು ಈ ರೀತಿ ಇದ್ದಾರೆ ಎಂಬುದು ನಂಬಲಸಾಧ್ಯವಾಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇವೆ' ಎಂದಿದ್ದಾರೆ.
(ಮಾಹಿತಿ ಕೃಪೆ ಪ್ರಜಾವಾಣಿ..)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ