ಬೆಂಗಳೂರು,ಏ.23- ಕೋವಿಡ್ ನಿಯಂತ್ರಣಕ್ಕಾಗಿ ದೇಶಾದ್ಯಂತ್ ಲಾಕ್‍ಡೌನ್ ಜಾರಿಗೊಳಿಸುವ ಯಾವುದೇ ಯೋಜನೆ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲದೇ ಇರುವುದರಿಂದ ಕಾರ್ಮಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಕಾರ್ಮಿಕ ಇಲಾಖೆ ಮನವಿ ಮಾಡಿದೆ. ಒಂದೆಡೆ ಪೊಲೀಸರು ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಅಂಗಡಿಗಳನ್ನು ಮುಚ್ಚಿಸಿಕೊಂಡು ಬರುತ್ತಿದ್ದಾರೆ. ಮಾಲೀಕರು ವ್ಯವಹಾರ ನಡೆಸದೇ ಇರುವುದರಿಂದ ಕಾರ್ಮಿಕರಿಗೆ ವೇತನ, ಕಟ್ಟಡದ ಬಾಡಿಗೆ, ವಿದ್ಯುತ್ ಹಾಗೂ ನೀರಿನ ಬಿಲ್ ಸೇರಿದಂತೆ ಇತರ ವೆಚ್ಚಗಳನ್ನು ಭರಿಸಲು ಪರದಾಡುವ ಸ್ಥಿತಿಯಲ್ಲಿದೆ.
ವಾಸ್ತವತೆ ಕಣ್ಣೆದುರಿಗೇ ಇದ್ದರೂ ಕಾರ್ಮಿಕ ಇಲಾಖೆ ವಿಚಿತ್ರ ರೀತಿಯಲ್ಲಿ ಪ್ರಕಟಣೆ ಹೊರಡಿಸಿದ್ದು, ಸರ್ಕಾರ ಮತ್ತು ಕಾರ್ಮಿಕರ ಇಲಾಖೆ ನಿಮ್ಮ ಜತೆಯಲ್ಲಿದೆ ಆತಂಕ ಪಡಬೇಡಿ ಎಂದು ಧೈರ್ಯ ಹೇಳುವ ಪ್ರಯತ್ನ ಮಾಡಿದೆ. ರಾಜ್ಯದಲ್ಲಿ ಲಾಕ್‍ಡೌನ್ ಇಲ್ಲ ಎಂದು ಮುಖ್ಯಮಂತ್ರಿ ಕೂಡ ಸ್ಪಷ್ಟಪಡಿಸಿ ದ್ದಾರೆ.
ವಲಸೆ ಕಾರ್ಮಿಕರು ಗಾಳಿಮಾತು ಹಾಗೂ ಸುಳ್ಳು ವದಂತಿಗಳಿಗೆ ಧೈರ್ಯಗೆಡುವ ಅಗತ್ಯವಿಲ್ಲ. ತಮ್ಮ ಊರುಗಳಿಗೆ ಹೋಗುವ ಅಗತ್ಯವಿಲ್ಲ. ನೀವು ಈಗ ಕಾರ್ಯ ನಿರ್ವಹಿಸುತ್ತಿರುವ ಜಾಗದಲ್ಲೇ ಸರ್ಕಾರದ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಕೆಲಸ ಮುಂದುವರೆಸಬೇಕು. ಹೊರಗುತ್ತಿಗೆ ನಿರ್ವಹಿಸುವ ಗುತ್ತಿಗೆದಾರರು ನಿಯಮಾವಳಿಗಳನ್ನು ಪಾಲಿಸಿ ಮಾಸ್ಕ್, ಸ್ಯಾನಿಟೇಜರ್ ವ್ಯವಸ್ಥೆ ಮಾಡಬೇಕು, ತಮ್ಮ ಬಳಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ಕೊಡಬೇಕು ಎಂದು ಇಲಾಖೆ ಸೂಚನೆ ನೀಡಿದೆ.
ಮೇ 1ರಿಂದ ರಾಜ್ಯಾದ್ಯಂತ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ನಿಯಂತ್ರಣ ಲಸಿಕೆ ಹಾಕಲಾಗುತ್ತದೆ. ಕಾರ್ಮಿಕರು ಲಸಿಕೆ ಹಾಕಿಸಿಕೊಳ್ಳಿ ಎಂದು ಇಲಾಖೆ ಸಲಹೆ ನೀಡಿದೆ. ಈಗಾಗಲೇ ಮೊದಲ ಹಂತದ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾಗಿ ನರಳಿದ ಕಾರ್ಮಿಕರು ಕೋವಿಡ್‍ನ ಎರಡನೇ ಅಲೆ ಹೆಚ್ಚಾದಾಗ ಸದ್ದಿಲ್ಲದೆ ತಮ್ಮ ಊರುಗಳತ್ತ ಮುಖ ಮಾಡಿದರು.
ಈಗಾಗಲೇ ಬಹಳಷ್ಟು ಮಂದಿ ವಾಪಸ್ ಹೋಗಿದ್ದಾರೆ. ತಡವಾಗಿ ಎಚ್ಚೆತ್ತುಕೊಂಡಿರುವ ಕಾರ್ಮಿಕ ಇಲಾಖೆ ಈಗ ಧೈರ್ಯ ಹೇಳುವ ಪ್ರಯತ್ನ ಮಾಡಿದೆ. ಆದರೆ, ಈಗಾಗಲೇ ಅನಕೃತ ಲಾಕ್‍ಡೌನ್‍ನಿಂದ ಉದ್ಯೋಗ ವಿಲ್ಲದೆ ಪರಿತಪಿಸುತ್ತಿರುವವರಿಗೆ ಯಾವ ರೀತಿ ನೆರವು ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಕಾರ್ಮಿಕ ಇಲಾಖೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿಲ್ಲ.
(ಮಾಹಿತಿ ಕೃಪೆ ಈ ಸಂಜೆ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ