ಬೆಂಗಳೂರು,ಏ.23- ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಚದುರಿದಂತೆ ಅಲ್ಲಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ಇದೇ ರೀತಿ ಇನ್ನೂ ಮೂರು ದಿನ ಮುಂದುವರೆಯುವ ಸಾಧ್ಯತೆ ಗಳಿವೆ. ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೂರು ದಿನಗಳ ಕಾಲ ಪೂರ್ವ ಮುಂಗಾರು ಮಳೆಯಾಗಲಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ. ಏ.26ರಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಇಳಿಮುಖವಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
ರಾಜ್ಯದಲ್ಲಿ ಬೇಸಿಗೆಯಲ್ಲಿ ಗುಡುಗು-ಮಿಂಚು, ಆಲಿಕಲ್ಲು ಸಹಿತ ಮಳೆಯಾಗುವುದು ವಾಡಿಕೆ. ಕೆಲವೆಡೆ ಭಾರೀ ಪ್ರಮಾಣದ ಆಲಿಕಲ್ಲು ಬಿದ್ದಿರುವ ವರದಿಯಾಗಿದೆ. ನಿನ್ನೆ ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪು, ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾದ ವರದಿಯಾಗಿದೆ.
ಕೆಲವು ಜಿಲ್ಲೆಗಳಲ್ಲಿ ಭಾಗಶಃ ಮಳೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇದೆ ಎಂದು ಹೇಳಿದರು. ಏ.1ರಿಂದ ನಿನ್ನೆಯವರೆಗೆ ರಾಜ್ಯದಲ್ಲಿ 27.1 ಮಿಲಿ ಮೀಟರ್‍ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆಯಾದಂತಾಗಿದೆ. ಕಳೆದ ಮೂರು ವಾರಗಳ ರಾಜ್ಯದ ವಾಡಿಕೆ ಪ್ರಮಾಣ 21.1 ಮಿಲಿಮೀಟರ್ ಆಗಿದ್ದು,
ಈ ಅವಯಲ್ಲಿ ವಾಡಿಕೆಗಿಂತ ಶೇ.28ರಷ್ಟು ಹೆಚ್ಚು ಮಳೆಯಾಗಿದೆ. 26 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬಳ್ಳಾರಿ, ಗದಗ, ಕೊಪ್ಪಳ, ರಾಯಚೂರು, ಗದಗ ಸೇರಿದಂತೆ 7 ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ. ರಾಜ್ಯದ 153 ತಾಲ್ಲೂಕುಗಳಲ್ಲಿ ವಾಡಿಕೆ ಮತ್ತು ಅದಕ್ಕಿಂತ ಹೆಚ್ಚು ಮಳೆಯಾಗಿದ್ದು, 74 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ. 34 ತಾಲ್ಲೂಕುಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ.
538 ಹೋಬಳಿಗಳಲ್ಲಿ ವಾಡಿಕೆ ಮಳೆಯಾಗಿದ್ದು, 352 ಹೋಬಳಿಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೆ, 153 ಹೋಬಳಿಗಳಲ್ಲಿ ಮಳೆ ಕೊರತೆ ಹೆಚ್ಚಾಗಿ ಕಂಡು ಬಂದಿದೆ ಎಂದು ತಿಳಿಸಿದರು.
ಏ.1ರಿಂದ ನಿನ್ನೆಯವರೆಗೆ ದಕ್ಷಿಣ ಒಳನಾಡಿನಲ್ಲಿ 30.6 ಮಿಲಿಮೀಟರ್, ಉತ್ತರ ಒಳನಾಡಿನಲ್ಲಿ 14.6 , ಮಲೆನಾಡಿನಲ್ಲಿ 43.3 ಹಾಗೂ ಕರಾವಳಿ ಭಾಗದಲ್ಲಿ 54.3 ಮಿಲಿ ಮೀಟರ್‍ನಷ್ಟು ಮಳೆಯಾಗಿದೆ ಎಂದು ಹೇಳಿದರು.
(ಮಾಹಿತಿ ಕೃಪೆ ಈ ಸಂಜೆ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ