ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೊಂದಿಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇನ್ಮುಂದೆ ನಡೆಯುವ ಮದುವೆಗಳಿಗೆ ಪಾಸ್ ಕಡ್ಡಾಯಗೊಳಿಸುವ ಜೊತೆಗೆ ನಿಷೇಧಿತ ಜಾತ್ರೆಗಳು ನಡೆದಲ್ಲಿ ಅದಕ್ಕೆ ಆಯಾ ಜಿಲ್ಲಾಧಿಕಾರಿಗಳು, ಎಸ್ಪಿಗಳನ್ನೇ ಹೊಣೆಗಾರರನ್ನಾಗಿ ಮಾಡುವ ತೀರ್ಮಾನಕ್ಕೆ ಬಂದಿದೆ.
ಸಚಿವರಾದ ಆರ್. ಅಶೋ,ಕ್ ಬಸವರಾಜ ಬೊಮ್ಮಾಯಿ ಹಾಗೂ ಡಾ.ಕೆ. ಸುಧಾಕರ್ ಅವರು ಶನಿವಾರ ವಿಕಾಸಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್. ಅಶೋಕ್, ಕೊರೊನಾ ಸೋಂಕು ಹೆಚ್ಚಳದ ಹಿನ್ನಲೆ ಇನ್ಮುಂದೆ ರಾಜ್ಯದಲ್ಲಿ ಯಾವುದೇ ಜಾತ್ರೆ ನಡೆಯಬಾರದು.
ಮದುವೆ ಸಮಾರಂಭಗಳಿಗೆ ಪಾಸ್ ಕಡ್ಡಾಯವಾಗಿದೆ. ಒಳಾಂಗಣದಲ್ಲಿ 100 ಜನರಿಗೆ ಅವಕಾಶವಿದ್ದು, ಹೊರಾಂಗಣದಲ್ಲಿ 200 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಮದುವೆಗೆ ಮುನ್ನ ಸಮೀಪದ ಠಾಣೆಯಲ್ಲಿ ಪಾಸ್ ಪಡೆಯಬೇಕು ಎಂದು ಹೇಳಿದರು. ಈಗಾಗಲೇ ಬುಕ್ ಆಗಿರುವ ಮದುವೆಗಳಿಗೆ ಪಾಸ್ ನಿಯಮ ಅನ್ವಯವಿಲ್ಲ, ಹೊಸದಾಗಿ ನಡೆಯುವುದಕ್ಕೆ ಪಾಸ್ ಅಗತ್ಯ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಸಭೆ,ಸಮಾರಂಭಗಳಿಗೂ ಇದು ಅನ್ವಯವಾಗುತ್ತದೆ ಎಂದಿದ್ದಾರೆ.
ಸಚಿವ ಆರ್ ಅಶೋಕ್ ಅವರು ಜಿಲ್ಲಾ ಡಿಸಿಗಳೊಂದಿಗೆ ಇಂದು ಚರ್ಚೆ ನಡೆಸಿದ್ದು, ಬೆಂಗಳೂರಿಗೆ ಸಂಬಂಧಿಸಿದಂತೆ ಸೋಮವಾರ ಸಭೆ ನಡೆಸಲಾಗುವುದು. ರಾಜಧಾನಿಯಲ್ಲಿ ಸೋಂಕು ಹೆಚ್ಚಳ ಸಂಬಂಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
(ಮಾಹಿತಿ ಕೃಪೆ Kannada News Now)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ