ಹೊಸದಿಲ್ಲಿ : ರಾಹುಲ್ ಗಾಂಧಿಯವರ ಹೇಳಿಕೆಯನ್ನು ತಿರುಚಿದ ಆರೋಪದಲ್ಲಿ ರಿಪಬ್ಲಿಕ್ ಟಿವಿ ಸಂಸ್ಥಾಪಕ ಅರ್ನಬ್ ಗೋಸ್ವಾಮಿ ಮೇಲೆ ಹಲವು ಪ್ರಕರಣಗಳು ದಾಖಲಾಗಿರುವ ಬೆನ್ನಲ್ಲೇ, ಯುವ ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ ಎಂದು ಟಿವಿ ನಿರೂಪಕರೂ ಆಗಿರುವ ಅವರು ಆಪಾದಿಸಿದ್ದಾರೆ.
ರಾತ್ರಿ ಪತ್ನಿಯ ಜತೆ ಮನೆಗೆ ಹೋಗುತ್ತಿದ್ದಾಗ ಈ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಇಂಥ ಹಲ್ಲೆಯಿಂದ ತಾವು ವಿಚಲಿತರಾಗಿಲ್ಲ ಎಂದು ಹೇಳಿಕೊಂಡು ಸೋನಿಯಾಗಾಂಧಿ ವಿರುದ್ಧ ವೈಯಕ್ತಿಕ ದಾಳಿ ನಡೆಸುವ ಅರ್ನಬ್ ಅವರ ಆಯನಿಮೇಶನ್ ವೀಡಿಯೊ ತುಣುಕನ್ನು ರಿಪಬ್ಲಿಕ್ ಟಿವಿ ಟ್ವೀಟ್ ಮಾಡಿದೆ. ಕೋಮು ದ್ವೇಷ ಹರಡುತ್ತಿರುವ ಆರೋಪದಲ್ಲಿ ಗೋಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಮಹಾರಾಷ್ಟ್ರದ ಸಚಿವರೊಬ್ಬರು ಹೇಳಿಕೆ ನೀಡಿದ ಬೆನ್ನಲ್ಲೇ ಗೋಸ್ವಾಮಿ ಈ ಆರೋಪ ಮಾಡಿದ್ದಾರೆ.
ಅರ್ನಬ್ ಗೋಸ್ವಾಮಿ ದಂಪತಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ದಾಳಿಕೋರರನ್ನು ಕಳುಹಿಸಿದ್ದಾರೆ ಎಂದು ಆಪಾದಿಸಿದ್ದಾರೆ. ಇದಕ್ಕೂ ಮುನ್ನ ಮಹಾರಾಷ್ಟ್ರ ವಿದ್ಯುತ್ ಖಾತೆ ಸಚಿವ ನಿತಿನ್ ರಾವುತ್ ಅವರು ಗೋಸ್ವಾಮಿ ವಿರುದ್ಧ ನಾಗ್ಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಕೋಮು ಗಲಭೆಗೆ ಪ್ರಚೋದನೆ ನೀಡಿರುವುದು ಮತ್ತು ಎರಡು ಗುಂಪುಗಳ ಮೇಲೆ ಧಾರ್ಮಿಕ ಅಥವಾ ಜನಾಂಗೀಯ ಹಿನ್ನೆಲೆಯಲ್ಲಿ ದ್ವೇಷ ಹರಡಲು ಪ್ರಯತ್ನಿಸುತ್ತಿರುವ ಆರೋಪವನ್ನು ಅರ್ನಬ್ ಮೇಲೆ ಹೊರಿಸಲಾಗಿದೆ. ಜತೆಗೆ ಧಾರ್ಮಿಕ ಭಾವನೆಯನ್ನು ಕೆರಳಿಸಲು ಉದ್ದೇಶಪೂರ್ವಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಪಾದಿಸಲಾಗಿದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ