ಹೊಸಪೇಟೆ: ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಶನಿವಾರ ಇಲ್ಲಿನ ಸಂಡೂರು ರಸ್ತೆಯ ನಿವೇದಿತಾ ಶಾಲೆಯ ಮೈದಾನದಲ್ಲಿ 'ಆಹಾರಾನಂದ' ಕಿಟ್‌ಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಮೈದಾನದ ಒಂದು ಅಂಚಿನಲ್ಲಿ ಕಿಟ್ ತುಂಬಿರುವ ಲಾರಿಗಳನ್ನು ನಿಲ್ಲಿಸಲಾಗಿತ್ತು. ಮೈದಾನದಲ್ಲಿ ಮಾರ್ಕಿಂಗ್ ಮಾಡಿ ಜನರನ್ನು ಅಂತರದಿಂದ ನಿಲ್ಲಿಸಿ, ಶಿಸ್ತುಬದ್ಧವಾಗಿ ಕಿಟ್‌ಗಳನ್ನು ಹಂಚಲಾಯಿತು.
ಕಿಟ್ ಹಂಚುವ ವಿಷಯ ಗೊತ್ತಾಗಿ ಜನ ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಈ ಸಾಲು ಸಂಡೂರು ರಸ್ತೆಯ ತುಂಗಭದ್ರಾ ಮೇಲ್ಮಟ್ಟದ ಕಾಲುವೆ (ಎಚ್.ಎಲ್.ಸಿ.) ವರೆಗೆ ಕಂಡು ಬಂತು. ಬೆಳಿಗ್ಗೆ 7ರಿಂದ 11 ಗಂಟೆಯ ವರೆಗೆ ಕರ್ಫ್ಯೂನಲ್ಲಿ ಸಡಿಲಿಕೆ ಇದೆ. ಸಡಿಲಿಕೆ ಅವಧಿ ಮುಗಿದಿದ್ದರಿಂದ ಅನೇಕರು ಕಿಟ್ ಸಿಗದೇ ವಾಪಾಸಾದರು.
ಅರಣ್ಯ ಸಚಿವ ಆನಂದ್ ಸಿಂಗ್ ಅವರು ಅಂತ್ಯೋದಯ ಹಾಗೂ ಬಿ.ಪಿ.ಎಲ್. ಕಾರ್ಡುದಾರರಿಗೆ ಈ ಕಿಟ್‌ಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಇತ್ತೀಚೆಗೆ ಕಿಟ್ ಹಾಗೂ ಟೋಕನ್ ಹಂಚುವಾಗ ಅಪಾರ ಸಂಖ್ಯೆಯಲ್ಲಿ ಜನ ನೆರೆದಿದ್ದರು. ತೀವ್ರ ಟೀಕೆ ವ್ಯಕ್ತವಾಗಿದ್ದರಿಂದ ಅದನ್ನು ಮೊಟಕುಗೊಳಿಸಿದ್ದರು. ಫಲಾನುಭವಿಗಳ ಮನೆಬಾಗಿಲಿಗೆ ಹೋಗಿ ಟೋಕನ್ ನೀಡಿದ್ದು, ಈಗ ಆಯಾ ಬಡಾವಣೆಗಳಲ್ಲಿ ಕಿಟ್ ವಿತರಿಸಲಾಗುತ್ತಿದೆ.
'ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಿಟ್ ವಿತರಿಸಲಾಗುತ್ತಿದೆ. ಜನರನ್ನು ಅಂತರದಿಂದ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಉಪವಿಭಾಗಾಧಿಕಾರಿ ಶೇಖ್ ತನ್ವೀರ್ ಆಸಿಫ್ 'ಪ್ರಜಾವಾಣಿ'ಗೆ ತಿಳಿಸಿದರು.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ