ಹೊಸದಿಲ್ಲಿ, ಎ.22: ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಯುಜಿಸಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ದಿಲ್ಲಿ ವಿವಿಯ ಸಿಬ್ಬಂದಿ ವರ್ಗದವರು ತಮ್ಮ ಒಂದು ದಿನದ ವೇತನವನ್ನು ನೀಡಿದ್ದರು. ಆದರೆ ವಿವಿಯ ಕುಲಪತಿ ಸುಮಾರು 4 ಕೋಟಿಯಷ್ಟು ಮೊತ್ತದ ಈ ಹಣವನ್ನು 'ಪಿಎಂ ಕೇರ್ಸ್' ನಿಧಿಗೆ ವರ್ಗಾಯಿಸಿದ್ದಾರೆ ಎಂದು ಸಿಬ್ಬಂದಿಯೊಬ್ಬರು ಆರೋಪಿಸಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸೂಚನೆಯಂತೆ ಈ ಬದಲಾವಣೆ ಮಾಡಲಾಗಿದೆ. ಅದರಂತೆ 4.04 ಕೋಟಿ ರೂ. ಹಣವನ್ನು ಪಿಎಂ ಕೇರ್ಸ್ ನಿಧಿಗೆ ಪಾವತಿಸಲಾಗಿದೆ ಎಂದು ದಿಲ್ಲಿ ವಿವಿಯ ಹಿರಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಆದರೆ ವಂತಿಗೆ ನೀಡಿದವರ ಗಮನಕ್ಕೂ ತಾರದೆ, ಅಂತಿಮ ಕ್ಷಣದಲ್ಲಿ ಬದಲಾವಣೆ ಮಾಡಿರುವುದು ಸರಿಯಲ್ಲ. ಕನಿಷ್ಟ ಪಕ್ಷ ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕಿತ್ತು ಎಂದು ಹಂಸರಾಜ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಮಿಥುರಾಜ್ ಧುಸಿಯಾ ಪ್ರತಿಕ್ರಿಯಿಸಿದ್ದಾರೆ.
ವಿವಿಯ ಕುಲಪತಿಯವರ ಈ ಕ್ರಮದ ಬಗ್ಗೆ ಹಲವು ಸಿಬ್ಬಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ದಿಲ್ಲಿ ವಿವಿ ಶಿಕ್ಷಕರ ಸಂಘ ಕುಲಪತಿಗೆ ಪತ್ರ ಬರೆದು ತೀವ್ರ ಆಕ್ಷೇಪ ಸೂಚಿಸಿದ್ದು, ಈ ರೀತಿಯ ಕ್ರಮದಿಂದ ವಿವಿಯ ವೃತ್ತಿಪರ ಕೆಲಸದ ಮೇಲೆ ನಾವಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ