ಪ್ರೌಢಶಾಲೆಯಲ್ಲಿರುವ ಹದಿಹರೆಯದ ಹುಡುಗರು ಸಾಮಾನ್ಯವಾಗಿ ತಮ್ಮ ಪಾಲಕರ ಬಳಿ ಏನು ಗಿಫ್ಟ್ ಕೇಳುತ್ತಾರೆ? ಸ್ಮಾರ್ಟ್ ಫೋನ್, ಪ್ಲೇ ಸ್ಟೇಷನ್, ಬೈಕ್ ಇತ್ಯಾದಿ… ಅಲ್ಲವೇ? ಆದರೆ, ಈಗಷ್ಟೇ 10ನೇ ತರಗತಿ ಮುಗಿಸಿರುವ ಮಹಾರಾಷ್ಟ್ರದ ಪುಣೆಯ ಈ ಹುಡುಗ ಕೇಳಿದ್ದು ಹೈಎಂಡ್ ಕ್ಯಾಮರಾ ಮತ್ತು ಟೆಲಿಸ್ಕೋಪ್! ಏಕೆಂದರೆ ಆಗಸದಲ್ಲಿರುವ ಚಂದ್ರ-ತಾರೆಗಳ ಸಮೂಹವೇ ಆತನ ಆಸಕ್ತಿಯ ಕ್ಷೇತ್ರ. ಆತ ಇತ್ತೀಚೆಗೆ ತೆಗೆದ ಚಂದ್ರನ ಸ್ಪಷ್ಟ ಚಿತ್ರ ದೇಶಾದ್ಯಂತ ಸದ್ದು ಮಾಡುತ್ತಿದೆ.
| ರಮೇಶ್ಕುಮಾರ ಎಡಮೋಳೆ
ಚಂದಮಾಮನನ್ನು ತೋರಿಸಿ ತಾಯಂದಿರು ಮಕ್ಕಳಿಗೆ ಕೈತುತ್ತು ನೀಡಲು ಆರಂಭಿಸಿದಾಗಲೇ ಚಂದ್ರನ ಬಗೆಗಿನ ಕುತೂಹಲ ಹುಟ್ಟಿಕೊಂಡಿತೇನೋ? ಚಂದ್ರನನ್ನು ಹತ್ತಿರದಿಂದ ನೋಡುವ, ಭೇಟಿ ಮಾಡುವ ಕುತೂಹಲ ಎಲ್ಲರಲ್ಲೂ ಇದ್ದದ್ದೇ. ಉಪಗ್ರಹಗಳನ್ನು ಕಳಿಸಿದ್ದಾಯ್ತು, ಸ್ವತಃ ಮಾನವನೇ ಚಂದ್ರನನ್ನು ರ್ಸ³ಸಿ ಬಂದರೂ ಚಂದ್ರನ ಕುರಿತ ಅಧ್ಯಯನ ಮುಂದುವರಿದೇ ಇದೆ.
ಪುಣೆಯ ವಿದ್ಯಾಭವನ್ ಹೈಸ್ಕೂಲ್ನಲ್ಲಿ ಈಗಷ್ಟೇ 10ನೇ ತರಗತಿ ಪೂರ್ಣಗೊಳಿಸಿರುವ ಪ್ರಥಮೇಶ್ ಜಾಜು ಕೂಡ ಎಲ್ಲ ಹುಡುಗರಂತೆ ಕಳೆದ ವರ್ಷವಿಡೀ ಲಾಕ್ಡೌನ್ನಿಂದಾಗಿ ಮನೆಯಲ್ಲೇ ಕುಳಿತೂಕುಳಿತೂ ಬೇಜಾರಾಗಿ ಹೋಗಿದ್ದ. ಆದರೆ ಅದೇ ಸಮಯವನ್ನು ಆತ ತನ್ನ ಕುತೂಹಲದ ಕ್ಷೇತ್ರದಲ್ಲಿ ಕೆಲಸ ಮಾಡಲು ಬಳಸಿಕೊಂಡ. ಅಚ್ಚರಿಗಳ ಆಗರವಾದ ಸೌರಮಂಡಲದ ಚಿತ್ರಗಳನ್ನು ಸೆರೆಹಿಡಿಯುವುದಕ್ಕೆ ತನ್ನೆಲ್ಲಾ ಸಮಯವನ್ನು ವಿನಿಯೋಗಿಸಿದ. ಆತ ತೆಗೆದ ಫೋಟೋಗಳೆಷ್ಟು ಗೊತ್ತಾ? 55 ಸಾವಿರಕ್ಕೂ ಅಧಿಕ! ಅದರಲ್ಲೂ ಹೆಚ್ಚಿನವು ಚಂದ್ರನ ಫೋಟೋಗಳು. ಟೆಲಿಸ್ಕೋಪ್ ಮತ್ತು ಕ್ಯಾಮೆರಾವನ್ನು ಉಪಯೋಗಿಸಿ ಸ್ಪಷ್ಟವಾದ ಚಂದ್ರನ ಫೋಟೋ ಸೆರೆಹಿಡಿಯಲು ಒಂದೇ ದಿನ ಸತತ 5 ಗಂಟೆ ಪ್ರಯತ್ನಪಟ್ಟಿದ್ದ. ಮೇ 3ರಂದು ತನ್ನ ಮನೆಯ ಮೇಲೆ ಮುಂಜಾನೆ 1.30 ರಿಂದ 5.30ರವರೆಗೆ ವಿವಿಧ ಆಯಾಮಗಳಲ್ಲಿ ಚಂದ್ರನ ಚಿತ್ರಗಳನ್ನು ಪ್ರಥಮೇಶ್ ಕ್ಲಿಕ್ಕಿಸಿದ್ದಾನೆ. ಬಳಿಕ ವಿವಿಧ ಎಡಿಟಿಂಗ್ ಸಾಫ್ಟ್ವೇರ್ಗಳನ್ನು ಬಳಸಿಕೊಂಡು ಸ್ಪಷ್ಟವಾದ ಚಂದ್ರನ ಚಿತ್ರವನ್ನು ಪೂರ್ಣಗೊಳಿಸಿದ್ದಾನೆ. ಅದಕ್ಕೆ ತಗುಲಿದ್ದು ಬರೋಬ್ಬರಿ 40 ತಾಸು! ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಆ ಫೋಟೋಗೆ ಸಾವಿರಾರು ಮೆಚ್ಚುಗೆಗಳು ಹರಿದುಬಂದಿದ್ದು, ಒಂದೇ ಒಂದು ಫೋಟೋ, ಇಡೀ ದೇಶವೇ ಪ್ರಥಮೇಶ್ ಕಡೆ ತಿರುಗಿ ನೋಡುವಂತೆ ಮಾಡಿದೆ. ಪುಣೆಯಲ್ಲಿರುವ ಭಾರತದ ಅತ್ಯಂತ ಹಳೆಯ ಅಸ್ಟ್ರೋ ಕ್ಲಬ್ ಜ್ಯೋತಿರ್ವಿದ್ಯಾಲಯದಲ್ಲಿ 3 ವರ್ಷದಿಂದ ಪ್ರಥಮೇಶ್ ಖಗೋಳ ವಿಜ್ಞಾನ ಕಲಿಯುತ್ತಿದ್ದಾನೆ. ಇದನ್ನು ಕೇವಲ ಹವ್ಯಾಸವಾಗಿ ಉಳಿಸಿಕೊಳ್ಳದೆ, ಖಗೋಳ ಭೌತಶಾಸ್ತ್ರಜ್ಞನಾಗುವ ಬಯಕೆ ಪ್ರಥಮೇಶ್ಗೆ ಇದೆ.
55 ಸಾವಿರ ಚಿತ್ರ ತೆಗೆದಿದ್ದೇಕೆ?
ಒಂದೇ ಶಾಟ್ನಲ್ಲಿ ತೆಗೆಯಬಹುದಾದ ಚಂದ್ರನ ಚಿತ್ರವನ್ನು 55 ಸಾವಿರ ಬಾರಿ ಕ್ಲಿಕ್ಕಿಸಿದ್ದೇಕೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದಕ್ಕೆ ಕಾರಣ ಹೀಗಿದೆ. ಯಾವುದೇ ಸಾಧನದಲ್ಲಿ ಚಿತ್ರವನ್ನು ನೋಡಿ, ಜೂಮ್ ಮಾಡಿದಾಗ ಚಿತ್ರ ಮಸುಕಾಗಿ ಕಾಣುತ್ತದೆ. ಅದನ್ನು ತಪ್ಪಿಸಿ, ಸ್ಪಷ್ಟವಾದ ಚಿತ್ರವನ್ನು ಪಡೆಯಲು 55 ಸಾವಿರ ಚಿತ್ರಗಳನ್ನು ತೆಗೆಯ ಲಾಗಿದೆ. ಹೀಗೆ ತೆಗೆಯುವಾಗ ಪನೋರಮಿಕ್ ಫೋಟೋಗ್ರಫಿ, ಮೊಸಾಯಿಕ್ ತಂತ್ರ ಮುಂತಾದವುಗಳನ್ನು ಪ್ರಥಮೇಶ್ ಬಳಸಿದ್ದಾನೆ.
ಒಟ್ಟುಗೂಡಿಸಿದಾಗ ಸೃಷ್ಟಿಯಾಯಿತು ಸ್ಪಷ್ಟ ಚಂದ್ರನ ಚಿತ್ರ
ಚಿತ್ರ ಸೆರೆಹಿಡಿಯಲು ಸೆಲೆಸ್ಟ್ರಾನ್ ಕಂಪನಿಯ 5 ಇಂಚಿನ ಕ್ಯಾಸ್ಸೆಗ್ರೇನ್ ಟೆಲಿಸ್ಕೋಪ್ ಜತೆಗೆ ಪ್ರತಿಷ್ಠಿತ ಕಂಪನಿಯ ಗ್ರಹ ಮತ್ತು ಚಂದ್ರನ ಇಮೇಜಿಂಗ್ ಸೂಪರ್ ಸ್ಪೀಡ್ ಕ್ಯಾಮೆರಾವನ್ನು ಪ್ರಥಮೇಶ್ ಬಳಸಿದ್ದಾನೆ. ಇದು ವಿಶಿಷ್ಟ ಕ್ಯಾಮೆರಾ. ವಿಡಿಯೋಗಳಲ್ಲಿ ಪ್ರತಿ ಭಾಗದ ಇಂಚಿಂಚೂ ಸ್ಪಷ್ಟ ಚಿತ್ರಗಳನ್ನು ನೀಡುತ್ತದೆ. ಚಂದ್ರನ 38 ವಿಡಿಯೋಗಳನ್ನು ಪ್ರಥಮೇಶ್ ಚಿತ್ರೀಕರಿಸಿದ್ದಾನೆ. ಪ್ರತಿ ವಿಡಿಯೋದಲ್ಲಿ 2000 ಫ್ರೇಮ್ಳಿದ್ದು, ಒಟ್ಟು 55 ಸಾವಿರ ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ. ಬಳಿಕ ವಿವಿಧ ಎಡಿಟಿಂಗ್ ಸಾಫ್ಟ್ವೇರ್ ಮೂಲಕ ಚಿತ್ರಗಳನ್ನು ಒಟ್ಟುಗೂಡಿಸಿದಾಗ ಮಸುಕಿಲ್ಲದ, ಸ್ಪಷ್ಟವಾದ ಅದ್ಭುತ ಫೋಟೋ ಲಭ್ಯವಾಗಿದೆ. ವಿಶೇಷ ವೆಂದರೆ ಚಂದ್ರನ ಮೇಲ್ಮೈನಲ್ಲಿ ನೀಲಿ ಮತ್ತು ಕಿತ್ತಳೆ ಬಣ್ಣದ ಛಾಯೆಗಳನ್ನು ಸೆರೆಹಿಡಿಯಲಾಗಿದೆ. ಇವು ಚಂದ್ರನ ಮೇಲ್ಮೈಯಲ್ಲಿನ ಹಲವಾರು ಖನಿಜ ಸಂಯೋಜನೆಗಳನ್ನು ಸೂಚಿಸುತ್ತವೆ. ವಿಭಿನ್ನ ಖನಿಜಗಳು ವಿಭಿನ್ನ ಬಣ್ಣವನ್ನು ಹೊಂದಿವೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ