WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Sunday, May 2, 2021

ಒಳನೋಟ: ಅಪಾಯ ಮರೆತು ಚುನಾವಣೆ ನಡೆಸಿದ ಶ್ರೀರಾಮುಲು

ದಾವಣಗೆರೆ/ಚಿತ್ರದುರ್ಗ: ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಧೈರ್ಯ ಹೇಳುವ ಕೆಲಸವನ್ನು ಒಂದಿಬ್ಬರು ಶಾಸಕರು ಮಾತ್ರ ಉತ್ಸಾಹದಿಂದ ಮಾಡುತ್ತಿದ್ದಾರೆ. ಚಿತ್ರದುರ್ಗದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸಕ್ರಿಯರಾಗಿದ್ದರು. ಮತದಾನ ಮುಗಿದ ಎರಡು ದಿನಗಳ ಬಳಿಕ ಜಿಲ್ಲಾ ಕೇಂದ್ರಕ್ಕೆ ಬಂದು ಅಧಿಕಾರಿಗಳ ಸಭೆ ನಡೆಸಿ ಮರಳಿದ್ದಾರೆ.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಹಾಗೂ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು ಅಪರೂಪ. ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಕೋವಿಡ್‌ ಸಿದ್ಧತೆಯ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರಿಗೆ ಕೋವಿಡ್‌ಗೆ ಒಳಗಾಗಿದ್ದು ಕ್ವಾರಂಟೈನ್‌ನಲ್ಲಿದ್ದಾರೆ.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ನಿತ್ಯವೂ ಕ್ಷೇತ್ರ ಸುತ್ತಿ ಜನರ ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ.

ಚಳ್ಳಕೆರೆಯ ಶಾಸಕರ ಭವನದಲ್ಲಿ ಅನ್ನ ದಾಸೋಹ ಆರಂಭಿಸಿದ್ದಾರೆ. ಸಂಸದ ಎ.ನಾರಾಯಣಸ್ವಾಮಿ ಎರಡು ವಾರಗಳಿಂದ ಲೋಕಸಭಾ ಕ್ಷೇತ್ರದಲ್ಲೇ ಉಳಿದಿದ್ದಾರೆ. ಅಧಿಕಾರಿಗಳ ಸಭೆ ನಡೆಸಿ ಕೋವಿಡ್‌ ಚಿಕಿತ್ಸೆ, ಆಕ್ಸಿಜನ್‌ ಹಾಗೂ ರೆಮ್‌ಡಿಸಿವಿರ್‌ ಚುಚ್ಚುಮದ್ದಿನ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಕೈಗೆ ಸಿಗದ ಸಚಿವರು: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಬೆಂಗಳೂರಿನಲ್ಲೇ ತಂಗಿದ್ದು, ಕೆಲ ದಿನಗಳ ಹಿಂದೆ ಜಿಲ್ಲೆಗೆ ಬಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈಚೆಗೆ ಜಿಲ್ಲಾಧಿಕಾರಿ ಜೊತೆಗೆ ವಿಡಿಯೊ ಕಾನ್ಫರೆನ್ಸ್‌ ಮಾಡಿ ಮಾಹಿತಿ ಪಡೆದುಕೊಂಡಿದ್ದಾರಷ್ಟೆ.

ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ಕಳೆದ ವಾರ ಜಿಲ್ಲಾಧಿಕಾರಿ ಜತೆ ಸಮಾಲೋಚನೆ ನಡೆಸಿದ್ದಾರೆ. ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಹರಿಹರದ ಶಾಸಕ ಎಸ್‌.ರಾಮಪ್ಪ ಅವರಿಗೆ ಕೋವಿಡ್‌ ದೃಢಪಟ್ಟಿದೆ. ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ, ಎಸ್‌.ಎ. ರವೀಂದ್ರನಾಥ ಹಾಗೂ ಮಾಯಕೊಂಡ ಶಾಸಕ ಲಿಂಗಣ್ಣ ಅವರು ಜನ ಸಂಪರ್ಕದಿಂದ ದೂರ ಉಳಿದಿದ್ದಾರೆ. ಜಗಳೂರಿನ ಶಾಸಕ ಎಸ್‌.ವಿ. ರಾಮಚಂದ್ರ ಅವರು ಸ್ಥಳೀಯವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಉತ್ಸಾಹದಿಂದ ಓಡಾಡಿದ ರೇಣುಕಾಚಾರ್ಯ
ಕಳೆದ ವರ್ಷ ಕೋವಿಡ್‌ ಕಾಣಿಸಿಕೊಂಡಾಗಲೂ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಈ ಬಾರಿಯೂ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಚೆಗೆ ಅವರಿಗೆ ಎರಡನೇ ಬಾರಿ ಕೋವಿಡ್‌ ಕಾಣಿಸಿಕೊಂಡಿತ್ತು. ಇದೀಗ ಗುಣಮುಖರಾಗಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಪಿಪಿಇ ಕಿಟ್‌ ಹಾಕಿಕೊಂಡು ತಾಲ್ಲೂಕು ಕೋವಿಡ್‌ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಧೈರ್ಯವನ್ನೂ ಹೇಳಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಬರಲು ಮಧ್ಯಾಹ್ನದವರೆಗೂ ಅವಕಾಶ ಮಾಡಿಕೊಡಬೇಕು ಎಂಬ ನ್ಯಾಮತಿ ರೈತರ ಬೇಡಿಕೆಗೆ ಸ್ಪಂದಿಸಿದ ರೇಣುಕಾಚಾರ್ಯ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿಯನ್ನೂ ಮಾಡಿದ್ದಾರೆ.

ವ್ಯವಸ್ಥಿತ ನಿರ್ವಹಣೆಗೆ ಬಲ ನೀಡಿದ ಸಚಿವ, ಸಂಸದ
ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ ಮುನ್ನೂರು ಕೋವಿಡ್‌ ರೋಗಿಗಳು ಪತ್ತೆಯಾದರೂ ಮೆಗ್ಗಾನ್ ಆಸ್ಪತ್ರೆಯಲ್ಲಿ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ಕೊರೊನಾ ಸೋಂಕು ವೇಗವಾಗಿ ಹರಡುವುದಕ್ಕೂ ಮೊದಲು ನಿರಂತರ ಸಭೆಗಳ ಮೂಲಕ ಸೂಕ್ತ ವ್ಯವಸ್ಥೆಗೆ ಶ್ರಮಿಸಿದ್ದರ ಫಲ ಇದು.

ವಾರದಲ್ಲಿ ಕನಿಷ್ಠ ಒಂದು ದಿನ ಇಬ್ಬರೂ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ. ಕೊರೊನಾ ಸೋಂಕು ಉಲ್ಬಣಗೊಳ್ಳುವ ಮೊದಲು ಆಸ್ಪತ್ರೆಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಿದ್ದರು. ಪರಿಣಾಮವಾಗಿ ಆಸ್ಪತ್ರೆ ಆವರಣದಲ್ಲಿ 16 ಸಾವಿರ ಲೀಟರ್ ಸಾಮರ್ಥ್ಯದ ಆಮ್ಲಜನಕ ಸಂಗ್ರಹ ಟ್ಯಾಂಕ್‌ ಸದಾ ತುಂಬಿರುತ್ತದೆ. ಬಳ್ಳಾರಿ ಜಿಲ್ಲೆಯ ಜಿಂದಾಲ್‌ನಿಂದ ಎರಡು ದಿನಕ್ಕೊಮ್ಮೆ ಆಮ್ಲಜನಕ ಪೂರೈಕೆಯಾಗುತ್ತಿದೆ. 800 ಆಮ್ಲಜನಕ ಸೌಕರ್ಯ ಇರುವ ಹಾಸಿಗೆಗಳು ಇವೆ. ಹೆಚ್ಚುವರಿಯಾಗಿ 250 ಹೆಚ್ಚುವರಿ ಆಮ್ಲಜನಕ ಪೂರೈಕೆ ಹಾಸಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ 50 ಆಮ್ಲಜನಕ ಪೂರೈಕೆಯ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ತಾಲ್ಲೂಕು ಕೇಂದ್ರಗಳಲ್ಲೂ ಇಬ್ಬರೂ ಸಭೆ ನಡೆಸಿದ್ದಾರೆ.

ಸಾಗರದ ಶಾಸಕ ಹಾಲಪ್ಪ ಎರಡನೇ ಅಲೆಗೂ ಮೊದಲು ಅಧಿಕಾರಿಗಳ ಸಭೆ ನಡೆಸಿ, ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಹೆಚ್ಚು ಶ್ರಮಿಸಿದವರು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ. ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಮಾತ್ರವಲ್ಲದೆ, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸರಣಿ ಸಭೆಗಳನ್ನು ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲು ಸಂಸದ ಬಿ.ವೈ.ರಾಘವೇಂದ್ರ ಕೋವಿಡ್‌ ನಿಯಂತ್ರಣದಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆ, ಆಮ್ಲಜನಕ ಪೂರೈಕೆ, ಅಗತ್ಯ ವೈದ್ಯರು, ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ.

ಸೊರಬದಲ್ಲಿ ಶಾಸಕ ಕುಮಾರ್ ಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ ಅವರು ಕ್ಷೇತ್ರದ ಜನರ ಕಾಳಜಿ ವಹಿಸಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಏಪ್ರಿಲ್‌ 30ರಂದು ಸೊರಬದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಕೋವಿಡ್‌ ಪರಿಶೀಲನಾ ಸಭೆಯಲ್ಲಿ ಕುಮಾರ್‌ ಬಂಗಾರಪ್ಪ ಪಾಲ್ಗೊಂಡಿದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ