ಕೋಲ್ಕತ್ತಾ, ಮೇ 03; ಪಶ್ಚಿಮ ಬಂಗಾಳದ ನಂದಿಗ್ರಾಮ ಕ್ಷೇತ್ರದ ಮರು ಮತ ಎಣಿಕೆಗೆ ಟಿಎಂಸಿ ಬೇಡಿಕೆ ಇಟ್ಟಿತ್ತು. ಚುನಾವಣಾ ಆಯೋಗ ಈ ಬೇಡಿಕೆಯನ್ನು ತಿರಸ್ಕರಿಸಿದೆ. ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಸೋಲು ಕಂಡಿದ್ದರು.
ನಂದಿಗ್ರಾಮ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುವೇಂದು ಅಧಿಕಾರಿ ಕಣದಲ್ಲಿದ್ದರು. ಮಮತಾ ಬ್ಯಾನರ್ಜಿ ಗೆದ್ದಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿತ್ತು. ಟಿಎಂಸಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದರು.
ಬಂಗಾಳ ಇಂದು ದೇಶವನ್ನು ರಕ್ಷಿಸಿದೆ: ಮಮತಾ ಬ್ಯಾನರ್ಜಿ
ಸುಮಾರು ಎರಡು ಗಂಟೆಗಳ ಬಳಿಕ ಬಿಜೆಪಿಯ ಸುವೇಂದು ಅಧಿಕಾರಿ 1736 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು. ಇದರಿಂದಾಗಿ ಕ್ಷೇತ್ರದ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.
ನಂದಿಗ್ರಾಮದಲ್ಲಿ ಸೋಲೊಪ್ಪಿಕೊಂಡ್ರು, ಬಂಗಾಳ ಗೆದ್ದ ಮಮತಾ
208 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಜಯ ಸಾಧಿಸಿದೆ. ಆದರೆ, ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋಲು ಕಂಡಿದ್ದಾರೆ. ಇದರಿಂದಾಗಿ ಟಿಎಂಸಿ ಪಕ್ಷ ಕ್ಷೇತ್ರದ ಮರು ಮತ ಎಣಿಕೆಗೆ ಒತ್ತಾಯ ಮಾಡಿತ್ತು.
"ಇನ್ನೂ ಮತ ಎಣಿಕೆ ನಡೆಯುತ್ತಿದೆ. ಫಲಿತಾಂಶಕ್ಕಾಗಿ ಕಾಯಿರಿ" ಎಂದು ಭಾನುವಾರ ಸಂಜೆ ಟಿಎಂಸಿ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಅಷ್ಟರಲ್ಲಿ ಮಮತಾ ಬ್ಯಾನರ್ಜಿ ಸೋತಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು.
ವಿರೋಧಿ ಪಾಳಯಕ್ಕೆ ನುಗ್ಗಿ ಹೋರಾಡಿ ಗೆದ್ದ ಮಮತಾ ಬ್ಯಾನರ್ಜಿ
ಚುನಾವಣಾ ಆಯೋಗದ ವೆಬ್ ಸೈಟ್ ಸಹ ಬಹಳ ನಿಧಾನವಾಗಿತ್ತು. ರಾತ್ರಿ 10.30ರ ತನಕ ಮಮತಾ ಬ್ಯಾನರ್ಜಿ ಮುನ್ನಡೆಯಲ್ಲಿದ್ದಾರೆ ಎಂದು ಅಂಕಿ-ಸಂಖ್ಯೆಗಳನ್ನು ತೋರಿಸುತ್ತಿತ್ತು. "ನಂದಿಗ್ರಾಮದ ಜನರು ಅವರಿಗೆ ಬೇಕಾದ ಫಲಿತಾಂಶವನ್ನು ನೀಡಿದ್ದಾರೆ. ಅದನ್ನು ನಾನು ಸ್ವೀಕರಿಸುತ್ತೇನೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ನಂದಿಗ್ರಾಮದ ಮತ ಎಣಿಕೆ ಆರಂಭವಾದ ಕ್ಷಣದಿಂದಲೇ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ನಡುವೆ ತೀವ್ರ ಪೈಪೋಟಿ ಇತ್ತು. ಒಂದು ಹಂತದಲ್ಲಿ ಮಮತಾ ಬ್ಯಾನರ್ಜಿ 10 ಸಾವಿರ ಮತಗಳ ಮುನ್ನಡೆ ಪಡೆದಿದ್ದರು. ಆದರೆ, ಬಳಿಕ ಮುನ್ನಡೆಯ ಅಂತರ ಕಡಿಮೆಯಾಗುತ್ತಾ ಸಾಗಿತ್ತು.
ಟಿಎಂಸಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಪುನಃ ರಾಜ್ಯದಲ್ಲಿ ಸರ್ಕಾರವನ್ನು ರಚನೆ ಮಾಡಲಿದೆ. ಪಕ್ಷದ ಗೆಲುವಿಗಾಗಿ ಮಮತಾ ಬ್ಯಾನರ್ಜಿಗೆ ವಿವಿಧ ರಾಜ್ಯದ ರಾಜಕೀಯ ನಾಯಕರು ಶುಭಾಶಯಗಳನ್ನು ತಿಳಿಸಿದ್ದಾರೆ.
source: oneindia.com
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ