ಹನುಮಸಾಗರ: ನಾಲ್ಕಾರು ವರ್ಷಗಳಿಂದ ನುಗ್ಗೆ ಬೆಳೆಯುವಲ್ಲಿ ಸಾಕಷ್ಟು ಅನುಭವ ಹೊಂದಿದ್ದ ಈ ಭಾಗದ ರೈತರು, ಈ ಬಾರಿ ಕನ್ಯಾಕುಮಾರಿಗೆ ಹೋಗಿ ವರ್ಷದಲ್ಲಿ ಎರಡು ಬಾರಿ ಫಸಲು ಬರುವಂತಹ ಬೀಜಗಳನ್ನು ತಂದು ಸಾವಯವ ಕೃಷಿಯಲ್ಲಿ ಬಿತ್ತನೆ ಮಾಡಿದ್ದರು. ಅಂದುಕೊಂಡಂತೆ ಅಧಿಕ ಪ್ರಮಾಣದಲ್ಲಿ ಇಳುವರಿಯೂ ಬಂದಿದೆ. ಆದರೆ ಲಾಕ್‌ಡೌನ್ ಕಾರಣದಿಂದ ಫಸಲು ಮಾರಾಟವಾಗದೆ ಗಿಡದಲ್ಲಿಯೇ ಕಾಯಿಗಳು ಬಲಿಯುತ್ತಿವೆ.
ರೈತರಾದ ಹನುಮಸಾಗರದ ಸಿರಾಜುದ್ದೀನ್ ಮೂಲಿಮನಿ, ಹುಸೇನ ಹುನಗುಂದ, ಮಡಿಕ್ಕೇರಿಯ ದೇವೇಂದ್ರಗೌಡ ಪಾಟೀಲ, ಯರಗೇರಿ ಗ್ರಾಮದ ವಿಶ್ವನಾಥ ಸೂಡಿ, ಮದ್ನಾಳ ಗ್ರಾಮದ ಯಮನೂರಪ್ಪ ಹಟ್ಟಿ, ತಳುವಗೇರಿಯ ಮಲ್ಲಿಕಾರ್ಜುನ ಮಸಾನಿ, ಕ್ಯಾದಿಗುಪ್ಪಿಯ ದೊಡ್ಡಪ್ಪ ಎಂಬ ರೈತರು ತಾವೇ ಒಕ್ಕೂಟ ರಚಿಸಿಕೊಂಡು ಹಲವಾರು ವರ್ಷಗಳಿಂದ ನುಗ್ಗೆ ಬೆಳೆ ಬೆಳೆಯುತ್ತಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ನುಗ್ಗೆಕಾಯಿ ಬೆಳೆಯುವುದರಿಂದ ಈ ಎಲ್ಲ ರೈತರು ಒಂದೇ ಸಮಯಕ್ಕೆ ಕೊಯ್ಲು ಮಾಡಿ, ವಿವಿಧ ಮಾರುಕಟ್ಟೆಗಳಲ್ಲಿನ ದರ ತಿಳಿದುಕೊಂಡು, ತಾವೇ ಒಂದು ವಾಹನ ಮಾಡಿಕೊಂಡು ಮಾರಾಟ ಮಾಡಿಕೊಂಡು ಬರುತ್ತಿದ್ದರು. ಹೈದರಾಬಾದ್, ಬೆಳಗಾವಿ, ಹುಬ್ಬಳ್ಳಿ, ಗದಗ, ಗಂಗಾವತಿ ಇವರ ಮುಖ್ಯ ಮಾರುಕಟ್ಟೆಗಳು.
ಈ ಹಿಂದಿನ ಅವಧಿಯಲ್ಲಿ ಹೈದರಾಬಾದ್‍ನಲ್ಲಿ ಪ್ರತಿ ಕೆ.ಜಿ ನುಗ್ಗೆಕಾಯಿಯನ್ನು ₹150 ರಂತೆ ಮಾರಾಟ ಮಾಡಿದ್ದರು. ಆದರೀಗ ಕೇವಲ ₹ 5ಕ್ಕೆ ಕೆ.ಜಿ ಕೇಳುತ್ತಿದ್ದಾರೆ. ಕೊಯ್ಲು ಮಾಡಿಸಿದರೆ ಅದರಿಂದ ಕೂಲಿ ಆಳಿನ ಖರ್ಚು ಬರುವುದಿಲ್ಲ. ಸದ್ಯ ಉತ್ತಮ ಫಲ ಬಂದಿದ್ದು, ಗಿಡದಲ್ಲಿಯೇ ಬಲಿಯುತ್ತಿದೆ. ಈ ಸಮಸ್ಯೆಗೆ ರೈತರ ಕೂಟ ಪರಿಹಾರ ಹುಡುಕಿಕೊಂಡಿದ್ದು, ಬಲಿತ ಕಾಯಿಗಳಿಂದ ಬೀಜೋತ್ಪಾದನೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಈ ಕಾರಣಕ್ಕಾಗಿಯೇ ವಿವಿಧ ಭಾಗಗಳಿಂದ ಬೀಜೋತ್ಪಾದನೆ ಮಾಡುವ ವಿಧಾನ ತಿಳಿದುಕೊಂಡು ಅದರತ್ತ ಹೆಜ್ಜೆ ಇಟ್ಟಿದ್ದಾರೆ.
'ಪ್ರತಿ ದಿನ 1 ಟನ್ ಫಸಲು ಬರುತ್ತದೆ, ಅದನ್ನು ಎಲ್ಲಿಗೆ ಕಳಿಸಬೇಕು, ಹಲವಾರು ಮಾರುಕಟ್ಟೆಗಳನ್ನು ಸಂಪರ್ಕಿಸಿದರೆ, ಸದ್ಯ ನುಗ್ಗೆ ತರಬೇಡಿ ಎನ್ನುತ್ತಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಅಬ್ಬಬ್ಬಾ ಎಂದರೆ ಒಂದು ಕ್ವಿಂಟಲ್‍ನಷ್ಟು ಕಡಿಮೆ ದರದಲ್ಲಿ ಖರ್ಚಾಗುತ್ತದೆ' ಎಂದು ಸಿರಾಜುದ್ದೀನ್ ನೋವಿನಿಂದ ಹೇಳುತ್ತಾರೆ.
ಇಲ್ಲಿಯವರೆಗೆ ವರ್ಷಕ್ಕೆ ಒಂದು ಬೆಳೆ ಬರುವಂತಹ ನುಗ್ಗೆ ತಳಿಗಳನ್ನು ಬಿತ್ತನೆ ಮಾಡುತ್ತಿದ್ದೆವು. ಕನ್ಯಾಕುಮಾರಿಯಲ್ಲಿ ವರ್ಷಕ್ಕೆ ಎರಡು ಬಾರಿ ಬೆಳೆ ಬರುವಂತಹ 'ಕನ್ಯಾಕುಮಾರಿ ಒಡಿಸ್ಸಿ-3' ಎಂಬ ಬೀಜ ಇದೆ ಎಂದು ತಿಳಿದು ನಾವೆಲ್ಲರೂ ಅಲ್ಲಿಗೆ ಹೋಗಿ, ಬೆಳೆ ಪರಿಶೀಲನೆ ಮಾಡಿ, ಪ್ರತಿ ಕೆ.ಜಿ ಬೀಜಕ್ಕೆ ₹3 ಸಾವಿರ ನೀಡಿ ತಂದಿದ್ದೇವೆ, ಸದ್ಯ ಪ್ರತಿ ರೈತರ ₹2 ಲಕ್ಷ ಮೌಲ್ಯದ ಬೆಳೆ ಹಾಳಾಗಿದೆ' ಎಂದು ತಳುವಗೇರಿಯ ಮಲ್ಲಿಕಾರ್ಜುನ ಮಸಾನಿ ತಿಳಿಸಿದರು.
'ಗೋ ಕೃಪಾಮೃತ ಜಲ'ವನ್ನು ದೇಸಿ ಹಸುವಿನ ಪಂಚಗವ್ಯ ಉತ್ಪನ್ನಗಳಾದ ಸಗಣಿ, ಹಾಲು, ತುಪ್ಪ, ಗಂಜಲ ಮತ್ತು ಮೊಸರನ್ನು ಬಳಸಿ ತಯಾರು ಮಾಡಿದ್ದೇವೆ. ಇದರಲ್ಲಿರುವ ಸೂಕ್ಷ್ಮಜೀವಿಗಳು ಮಣ್ಣಿನಲ್ಲಿನ ಸಾರಜನಕವನ್ನು ಸ್ಥಿರೀಕರಿಸುವುದರ ಜೊತೆಗೆ ಮಣ್ಣಿನ ಫಲವತ್ತತೆ ಕಾಪಾಡಿದ್ದರಿಂದ ಸುಮಾರು 10ರಿಂದ 15 ಅಡಿವರೆಗೆ ಎತ್ತರವಿರುವ ಈ ಗಿಡಗಳಲ್ಲಿ 3ರಿಂದ4 ಅಡಿಯಷ್ಟು ಕಾಯಿಗಳು ಉದ್ದ ಹೊಂದಿವೆ. ಕಾಯಿಯ ಭಾರಕ್ಕೆ ಗಿಡಗಳು ನೆಲಕ್ಕೆ ತಾಕಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎಂದು ಮಡಿಕ್ಕೇರಿಯ ರೈತ ದೇವೇಂದ್ರಗೌಡ ಪಾಟೀಲ ಹೇಳಿದರು.
'ಬೀಜ ತಯಾರಿಸಿ ಅದರಲ್ಲಿನ ಗುಣಮಟ್ಟದ ಬೀಜ ಸಂಸ್ಕರಿಸಿದ ನಂತರ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ರೈತರಿಗೆ ನೀಡುವ ಹಾಗೂ ಉಚಿತವಾಗಿ ಗೋ ಕೃಪಾಮೃತ ಜಲ ನೀಡುವ ಉದ್ದೇಶ ಹೊಂದಿದ್ದೇವೆ' ಎಂದು ಸಿರಾಜುದ್ದೀನ್ ಮೂಲಿಮನಿ ತಿಳಿಸಿದರು. ರೈತರು ಹೆಚ್ಚಿನ ಮಾಹಿತಿಗಾಗಿ(9845427205) ಸಂಪರ್ಕಿಸಬಹುದು.
(ಮಾಹಿತಿ ಕೃಪೆ ಪ್ರಜಾವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ