ಬೆಳಗಾವಿ: ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಮಂಗಲಾ ಸುರೇಶ ಅಂಗಡಿ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ, ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲಿಗೆ ಮಹಿಳೆಯೊಬ್ಬರು ಇಲ್ಲಿ ವಿಜಯಿಯಾದ ಇತಿಹಾಸ ನಿರ್ಮಾಣವಾಗಿದೆ. ಪ್ರಥಮ ಪ್ರಯತ್ನದಲ್ಲೇ ಅವರು ಲೋಕಸಭೆ ಪ್ರವೇಶಿಸಿರುವುದು ಮತ್ತೊಂದು ವಿಶೇಷ.
ಪ್ರತಿ ಸ್ಪರ್ಧಿ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಅವರು ತೀವ್ರ ಪೈಪೋಟಿ ನೀಡಿದ್ದರಿಂದಾಗಿ, ಆಡಳಿತ ಪಕ್ಷದ ಅಭ್ಯರ್ಥಿ ಮಂಗಲಾಗೆ ಗೆಲುವು ಸುಲಭದ ತುತ್ತೇನೂ ಆಗಲಿಲ್ಲ. ಕೇಂದ್ರದಲ್ಲಿ ಸಚಿವರಾಗಿದ್ದ ಇಲ್ಲಿನ ಸಂಸದ ಸುರೇಶ ಅಂಗಡಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಅವರು ಸತತ ನಾಲ್ಕು ಚುನಾವಣೆಗಳಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಸೇರಿದಂತೆ ಹಲವು ಸಚಿವರು ಇಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರು. ಯಡಿಯೂರಪ್ಪ ಅವರು ಜ್ವರದ ನಡುವೆಯೂ ಪ್ರಚಾರ ಕೈಗೊಂಡಿದ್ದರು. ವಿವಿಧ ಸಮಾಜಗಳ ಸಭೆಗಳನ್ನು ನಡೆಸಿ, ಬೆಂಬಲ ಕೋರಿದ್ದರು. ಅದಕ್ಕೆ ತಕ್ಕಂತೆ 'ಮತ ಫಸಲು' ಸಿಕ್ಕಿಲ್ಲವಾದರೂ ಗೆಲುವಿನ 'ಕುಂದಾ' ಬಿಜೆಪಿಗೆ ದಕ್ಕಿದೆ.
ಮತ ಎಣಿಕೆ ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರಿಂದ ಬಿಜೆಪಿ ಪಾಳಯದಲ್ಲಿ ಆತಂಕ ಶುರುವಾಗಿತ್ತು. ಬಳಿಕ, ಮಂಗಲಾ ಮುನ್ನಡೆ ಕಾಯ್ದುಕೊಂಡರು. 10ಸಾವಿರ ಗಡಿ ದಾಟಿ ಮುನ್ನಡೆ ಗಳಿಸಿದ್ದರು. ಮಧ್ಯಾಹ್ನದ ನಂತರ ಹಿನ್ನಡೆ ಅನುಭವಿಸಿದ್ದರು. ಒಂದು ಹಂತದಲ್ಲಿ ಸತೀಶ 10ಸಾವಿರ ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದರು. ಕೊನೆಯ ಸುತ್ತುಗಳು ರೋಚಕವಾಗಿದ್ದವು. ಕೆಲವೇ ಸುತ್ತುಗಳು ಬಾಕಿ ಇವೆ ಎನ್ನುವಾಗಲೂ ಬಿಜೆಪಿ ಹಿನ್ನಡೆಯಲ್ಲಿತ್ತು. ರಮೇಶ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ವಿಧಾನಸಭಾ ಕ್ಷೇತ್ರದ ಮತಗಳು ಬಿಜೆಪಿ ಕೈಹಿಡಿದವು. ಪತಿ ಸಾವಿನಿಂದ ಉಂಟಾಗಿದ್ದ ಅನುಕಂಪದ ಅಲೆಯೂ ಮಂಗಲಾ ಅವರಿಗೆ ನೆರವಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಫಲಿತಾಂಶ ವಿವರ
ಒಟ್ಟು ಮತದಾರರು: 18,21,614
ಮತದಾನ ಮಾಡಿದವರು: 10,11,616
ಪ್ರತಿಶತ ಮತದಾನ: 56.02
ಅಭ್ಯರ್ಥಿಗಳು; ಪಕ್ಷ; ಪಡೆದ ಮತಗಳು
ಮಂಗಲಾ ಸುರೇಶ ಅಂಗಡಿ; ಬಿಜೆಪಿ; 4,40,327
ಸತೀಶ ಜಾರಕಿಹೊಳಿ; ಕಾಂಗ್ರೆಸ್; 4,35,087
ವಿವೇಕಾನಂದ ಬಾಬು ಘಂಟಿ; ಕರ್ನಾಟಕ ರಾಷ್ಟ್ರ ಸಮಿತಿ; 4844
ವೆಂಕಟೇಶ್ವರ ಸ್ವಾಮೀಜಿ; ಹಿಂದೂಸ್ತಾನ ಜನತಾ ಪಕ್ಷ; 2015
ಸುರೇಶ ಬಸಪ್ಪ ಮರಲಿಂಗಣ್ಣವರಲ; ಕರ್ನಾಟಕ ಕಾರ್ಮಿಕರ ಪಕ್ಷ; 2021
ಅಪ್ಪಾಸಾಹೇಬ ಶ್ರೀಪತಿ ಕುರಣೆ; ಪಕ್ಷೇತರ; 1364
ಗೌತಮ ಯಮನಪ್ಪ ಕಾಂಬಳೆ; ಪಕ್ಷೇತರ; 1390
ನಾಗಪ್ಪ ಕಳಸಣ್ಣವರ; ಪಕ್ಷೇತರ; 3006
ಶುಭಂ ಶೆಳಕೆ; ಪಕ್ಷೇತರ; 1,17,174
ಶ್ರೀಕಾಂತ ಪಡಸಲಗಿ; ಪಕ್ಷೇತರ; 4388
'ನೋಟಾ'ಗೆ ಬಂದ ಮತಗಳು; 10,631
ತಿರಸ್ಕೃತ ಮತಗಳು; 546
(ಮಾಹಿತಿ ಕೃಪೆ ಪ್ರಜಾವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ