ಲಖನೌ: ದೇಶದಲ್ಲಿ ಮಹಾಮಾರಿ ಕರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಯಾರು ಎದರು ನೋಡದ ಸನ್ನಿವೇಶಗಳು ಕಣ್ಣಮುಂದೆ ನಡೆಯುತ್ತಿರುವುದು ದುರ್ದೈವ ಸಂಗತಿಯಾಗಿದೆ.
ಮಹಿಳೆಯೊಬ್ಬಳು ಆಟೋವೊಂದರಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ಪತಿಯನ್ನು ಉಳಿಸಿಕೊಳ್ಳಲು ಕರೊನಾ ನಡುವೆಯೂ ಬಾಯಿಗೆ ಬಾಯಿ ಹಾಕಿ ಉಸಿರು ನೀಡುವ ಮೂಲಕ ಹೃದಯ ಮತ್ತು ಶ್ವಾಸಕೋಶ ಪ್ರಚೋದಿಸಲು (ಸಿಪಿಆರ್) ಯತ್ನಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೋಟೋದಲ್ಲಿರುವ ಮಹಿಳೆಯನ್ನು ರೇಣು ಸಿಂಘಾಲ್ ಎಂದು ಗುರುತಿಸಲಾಗಿದೆ. ಕೋವಿಡ್ ರೋಗಿ ಆಗಿರುವ ತನ್ನ ಪತಿ ರವಿ ಸಿಂಘಾಲ್ ಉಸಿರಾಟದ ಸಮಸ್ಯೆಯಿಂದ ಕುಸಿದುಬಿದ್ದಿದ್ದ. ಹೃದಯ ಮತ್ತು ಶ್ವಾಸಕೋಶ ಪೂರ್ಣವಾಗಿ ಕಾರ್ಯ ನಿರ್ವಹಿಸುವುದನ್ನು ನಿಂತುಬಿಡಬಹುದು ಎಂಬ ಭಯದಿಂದ ಬಾಯಿಗೆ ಬಾಯಿ ಹಾಕಿ ಉಸಿರುವ ನೀಡುವ ಮೂಲಕ ಹೃದಯ ಮತ್ತು ಶ್ವಾಸಕೋಶ ಪ್ರಚೋದಿಸಿ, ಪತಿಯನ್ನು ಉಳಿಸಿಕೊಳ್ಳಲು ಯತ್ನಿಸಿದರು.
ಆದರೆ, ವಿಧಿಯ ಅಟ್ಟಹಾಸದ ನಡುವೆ ಮಹಿಳೆಯ ಪ್ರಯತ್ನ ಫಲ ಕೊಡಲಿಲ್ಲ. ಪತಿ ರವಿ ಸಿಂಘಾಲ್ ಆಟೋದಲ್ಲಿಯೇ ಕೊನೆಯುಸಿರೆಳೆದರು. ಆಗ್ರಾದ ಎಸ್ಎನ್ ಮೆಡಿಕಲ್ ಆಸ್ಪತ್ರೆಯಲ್ಲೂ ರವಿ ನಿಧನರಾಗಿದ್ದಾರೆಂದು ಘೋಷಿಸಿದರು.
ದೇಶದಲ್ಲಿ ಉಂಟಾಗಿರುವ ಆಮ್ಲಜನಕ ಕೊರತೆಯಿಂದಾಗಿ ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿವೆ. ಇತ್ತ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಇರುವುದು ಸಹ ಅನೇಕ ಕರೊನಾ ಸೋಂಕಿತರ ಸಾವು ಸಂಭವಿಸುತ್ತಿದೆ. ಕರೊನಾ ಈಗಾಗಲೇ ದೇಶದಲ್ಲಿ ಮೃತ್ಯಕೂಪ ನಿರ್ಮಿಸಿದ್ದು, ಸಾವಿನ ಕೇಕೆ ಹಾಕುತ್ತಿದ್ದು, ದೇಶದ ವೈಫಲ್ಯವನ್ನು ಎತ್ತಿ ತೋರಿಸಿದೆ. ಇನ್ನಾದರೂ ಮಾನವನ ಮೂಲಭೂತ ಅವಶ್ಯಕತೆಗಳ ಬಗ್ಗೆ ಎಲ್ಲರೂ ಗಮನ ಹರಿಸಬೇಕಿದೆ. ಕರೊನಾದಿಂದಲೂ ಪಾಠ ಕಲಿಯದಿದ್ದರೆ ಮುಂದಿನ ಪರಿಸ್ಥಿತಿ ಇದಕ್ಕಿಂತಲೂ ಭೀಕರವಾಗಿದ್ದರೆ ಅಚ್ಚರಿಪಡಬೇಕಿಲ್ಲ. (ಏಜೆನ್ಸೀಸ್)
(ಮಾಹಿತಿ ಕೃಪೆ ವಿಜಯವಾಣಿ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ