ಮಂಗಳೂರು, ಮೇ 1: ನಾವು ಮೈ ಮುರಿದು ದುಡಿದು ತಿನ್ನುವವರು. ವಾರದ ರಜೆಯ ಹೊರೆತು ಇತರ ದಿನಗಳಲ್ಲಿ ರಜೆ ಹಾಕಿ ಗೊತ್ತೇ ಇಲ್ಲ. ಆದರೆ, ಈ ಕೊರೋನ-ಲಾಕ್‌ಡೌನ್ ನಮ್ಮಂತಹವರ ದುಡಿಯುವ ಕೈಗಳಿಂದ ಕೆಲಸವನ್ನು ಕಸಿದುಕೊಂಡಿದೆ. ಸದ್ಯ ಊಟಕ್ಕೇನೂ ತೊಂದರೆ ಇಲ್ಲ. ಆದರೆ ಮನೆ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್, ಅಡುಗೆ ಅನಿಲಕ್ಕೆ ಹಣ ಬೇಕಲ್ಲ. ದುಡಿದರೆ ಮಾತ್ರ ಹಣ ನಮ್ಮ ಕೈ ಸೇರುತ್ತದೆ. ದುಡಿಯದೇ ಇದ್ದರೆ ನಿಗದಿತ ದಿನಗಳಲ್ಲಿ ಬರುವ ಆ ಬಿಲ್‌ಗಳು, ಮನೆಬಾಡಿಗೆಯನ್ನು ಹೇಗೆ ಪಾವತಿಸಲಿ ? ಇದು ನಗರ ಮಾತ್ರವಲ್ಲ ಗ್ರಾಮಾಂತರ ಪ್ರದೇಶದ ಕಾರ್ಮಿಕರು ಮುಂದಿಡುವ ಪ್ರಶ್ನೆಗಳು. ಅಷ್ಟೇ ಅಲ್ಲ, ನೂರಾರು ಕಾರ್ಮಿಕರ ಅಳಲೂ ಇದೇ ಆಗಿದೆ.
'ನಾನು ಮೇಸ್ತ್ರಿಯೊಬ್ಬರ ಬಳಿ ಹೆಲ್ಪರ್ ಆಗಿ ಊರು ಅಥವಾ ಹತ್ತಿರದ ಊರಿಗೆ ಹೋಗಿ ಕೆಲಸ ಮಾಡುತ್ತಿದ್ದೆ. ಕೋವಿಡ್ ಕರ್ಫ್ಯೂ ಹೇರಿದ ಬಳಿಕ ಒಂದೆರೆಡು ದಿನ ಊರಲ್ಲೇ ಕೆಲಸ ಮಾಡಿದೆ. ಈಗ ಊರಲ್ಲಿ ಕೆಲಸವಿಲ್ಲ. ಬೇರೆ ಕಡೆ ಕಟ್ಟಡ ನಿರ್ಮಾಣದ ಕೆಲಸವಿದ್ದರೂ ಬಸ್ಸಿನಲ್ಲಿ ಹೋಗವೇಕಿದೆ. ಆದರೆ ಬಸ್ಸೇ ಇಲ್ಲದ ಮೇಲೆ ಹೋಗುವುದು ಯಾಕೆ ? ರಿಕ್ಷಾ ಮತ್ತಿತರ ವಾಹನಗಳಲ್ಲಿ ಹೋಗಿ ಬರುವುದು ಅಷ್ಟು ಸುಲಭದ ವಿಷಯವಲ್ಲ. ದುಡಿದದ್ದೆಲ್ಲವೂ ವಾಹನಗಳ ಬಾಡಿಗೆಗೆ ಕೊಡಬೇಕಾದೀತು. ಹಾಗಾಗಿ ಕೆಲಸವಿದ್ದೂ ಕೆಲಸ ಮಾಡಲಾಗದಂತಹ ಸ್ಥಿತಿ ನಮ್ಮದಾಗಿದೆ. ಕಳೆದ ವರ್ಷದ ಕೊರೋನವೇ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿತ್ತು. ಇದೀಗ ಈ ಬಾರಿಯ ಕೊರೋನ ನಮ್ಮೆಲ್ಲರ ನೆಮ್ಮದಿ ಕೆಡಿಸಿದೆ. ದುಡಿಯುವ ಶಕ್ತಿ ಮತ್ತು ಮನಸ್ಸಿದ್ದರೂ ಕೂಡ ಕೆಲಸ ಮಾಡಲಾಗದ ವಾತಾವರಣ ಸೃಷ್ಟಿಯಾಗಿದೆ ಎಂದು ಗ್ರಾಮಾಂತರ ಪ್ರದೇಶದ ಕಟ್ಟಡ ನಿರ್ಮಾಣ ಕಾರ್ಮಿಕ ಗೋಪಾಲಕೃಷ್ಣ ಅಭಿಪ್ರಾಯಪಡುತ್ತಾರೆ.
ಕೇವಲ ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಮಾತ್ರವಲ್ಲದೆ ಆಟೋ ರಿಕ್ಷಾ ಚಾಲಕರು, ಖಾಸಗಿ ಬಸ್ಸಿನ ಚಾಲಕರು, ನಿರ್ವಾಹಕರು, ಇತರ ಬಾಡಿಗೆ ವಾಹನಗಳ ಚಾಲಕರ ಸ್ಥಿತಿಯೂ ಇದೇ ರೀತಿಯಾಗಿದೆ. ಸರಕಾರ ಕೊರೋನ ನಿಗ್ರಹಕ್ಕಾಗಿ ಲಾಕ್‌ಡೌನ್ ಹೇರುತ್ತದೆ. ಆದರೆ ಅದರಿಂದ ನಮ್ಮಂತಹವರ ಬದುಕು ಯಾವ ರೀತಿ ಆಗಲಿದೆ ಎಂಬುದನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳುವುದಿಲ್ಲ. ದುಡಿದರಷ್ಟೇ ನಮಗೆ ನೆಮ್ಮದಿ. ಕಳೆದ 'ಕಾರ್ಮಿಕ ದಿನಾಚರಣೆ'ಯಂದು ಕೂಡ ಕೊರೋನ ನಮ್ಮ ಬದುಕಿಗೆ ಕೊಳ್ಳಿ ಇಟ್ಟಿತು. ಈ ಬಾರಿಯೂ ಅದೇ ಸ್ಥಿತಿ. ಈ ಕೊರೋನ ನಮ್ಮನ್ನು ಯಾವಾಗ ಬಿಟ್ಟು ಹೋಗುತ್ತದೋ ಏನೋ? ಎಂದು ಕಾರ್ಮಿಕ ಮಜೀದ್ ಅವರ ಚಿಂತೆಯಾಗಿದೆ.
ನಾನು ಮರಳುಗಾರಿಕೆಯ ಕೆಲಸ ಮಾಡುತ್ತಿದ್ದೇನೆ. ನಮ್ಮಿಂದಿಗೆ ಉತ್ತರ ಭಾರತದ ಹಲವಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೊರೋನ-ಲಾಕ್‌ಡೌನ್‌ನಿಂದ ಭಯಗೊಂಡ ಹಲವಾರು ಮಂದಿ ತವರೂರಿಗೆ ಮರಳಿದ್ದಾರೆ. ಇದೀಗ ಕೆಲಸಗಾರರ ಕೊರತೆ ಇದೆ. ಹಾಗಾಗಿ ಮರಳು ಗುತ್ತಿಗೆದಾರರು ಮರಳು ತೆಗೆಯಲು ಆಸಕ್ತಿ ವಹಿಸುತ್ತಿಲ್ಲ. ನಮಗೆ ಕೆಲಸ ಮಾಡಲು ಮನಸ್ಸಿದ್ದರೂ ಕಡಿಮೆ ಜನರಿದ್ದ ಕಾರಣ ನಮಗೂ ಕೆಲಸ ಇಲ್ಲದಂತಾಗಿದೆ. ಮರಳು ಪೂರೈಕೆ ಕಡಿಮೆಯಾದರೆ ನಿರ್ಮಾಣ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಲ್ಲಿನ ಕಾರ್ಮಿಕರಿಗೂ ಕೆಲಸ ಇಲ್ಲದಂತಾಗಿದೆ ಎಂದು ದಯಾನಂದ್ ಎಂಬವರು ಅಭಿಪ್ರಾಯಪಡುತ್ತಾರೆ.
ನಾನು ನನ್ನ ಮನೆಯಿಂದ 7 ಕಿ.ಮೀ. ದೂರದಲ್ಲಿರುವ ಒಂದು ಮನೆ ನಿರ್ಮಾಣದ ಕೆಲಸ ಮಾಡುತ್ತಿದ್ದೆ. ನಮಗೆ ಅಲ್ಲೇ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಆದರೆ ನಮಗೆ ಅಲ್ಲೇ ವಸತಿ, ಊಟದ ವ್ಯವಸ್ಥೆ ಕಲ್ಪಿಸಿ ಕೆಲಸ ಮಾಡಿಸಲು ಗುತ್ತಿಗೆದಾರರಿಗೂ ಅಸಾಧ್ಯ. ಹಾಗಾಗಿ ನಮಗೆ ಕೆಲಸವಿದ್ದೂ ಇಲ್ಲದಂತಾಗಿದೆ ಎಂದು ಕಾರ್ಮಿಕ ಮಜೀದ್ ಅಭಿಪ್ರಾಯಪಡುತ್ತಾರೆ.
ಒಟ್ಟಿನಲ್ಲಿ ಕೊರೋನ-ಲಾಕ್‌ಡೌನ್ ಕಾರ್ಮಿಕರನ್ನು ಬೀದಿ ಪಾಲು ಮಾಡುತ್ತಿದ್ದು, ಒಮ್ಮೆ ಇದರಿಂದ ಪಾರಾದರೆ ಸಾಕು ಎಂದು ಬಯಸುತ್ತಿದ್ದಾರೆ.
(ಮಾಹಿತಿ ಕೃಪೆ ವಾರ್ತಾಭಾರತಿ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ