ಬೆಂಗಳೂರು: 'ನಮ್ಮ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಇದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಏನಾದರೂ ಹೆಚ್ಚು ಕಡಿಮೆ ಆದರೆ, ನಮ್ಮನ್ನು ದೂರದಿರಿ. ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಯೋಚಿಸಿ....'
ಬಿ.ಯು.ನಂಬರ್ ಪಡೆದು ಚಿಕಿತ್ಸೆಗೆ ದಾಖಲಾಗಲು ಬರುವ ಕೋವಿಡ್ ರೋಗಿಗಳು ಹಾಗೂ ಅವರ ಬಂಧುಗಳ ಜೊತೆ ಆಸ್ಪತ್ರೆ ಸಿಬ್ಬಂದಿ ವರ್ತಿಸುವ ಪರಿ ಇದು. ಆಮ್ಲಜನಕ ಕೊರತೆಯನ್ನು ದಾಳವಾಗಿ ಬಳಸುತ್ತಿರುವ ಆಸ್ಪತ್ರೆಗಳು, ಬಿಬಿಎಂಪಿ ವತಿಯಿಂದ ದಾಖಲಾಗುವ ರೋಗಿಗಳಲ್ಲಿ ಆತಂಕ ಹುಟ್ಟುವಂತೆ ಮಾಡಿ ಅವರನ್ನು ಬೇರೆಡೆಗೆ ಸಾಗ ಹಾಕಲು ಪ್ರಯತ್ನ ಮಾಡುತ್ತಿವೆ.
ಲಗ್ಗೆರೆಯ ಕೋವಿಡ್ ರೋಗಿಯೊಬ್ಬರ ಚಿಕಿತ್ಸೆಗೆ ಬಿಬಿಎಂಪಿಯು ಕೇಂದ್ರೀಕೃತ ಹಾಸಿಗೆ ಹಂಚಿಕೆ ವ್ಯವಸ್ಥೆಯ ಮೂಲಕ ಸಪ್ತಗಿರಿ ಆಸ್ಪತ್ರೆಯ ಎಚ್‌ಡಿಯು ಹಾಸಿಗೆಯನ್ನು ಶನಿವಾರ ಕಾಯ್ದಿರಿಸಿತ್ತು. ಬಿಬಿಎಂಪಿ ವಾರ್ ರೂಂ ಸಿಬ್ಬಂದಿ ರೋಗಿಯ ಬಂಧುಗಳಿಗೆ ಕರೆ ಮಾಡಿ ಸಪ್ತಗಿರಿ ಆಸ್ಪತ್ರೆಗೆ ರೋಗಿಯನ್ನು ದಾಖಲಿಸುವಂತೆ ಹೇಳಿದ್ದರು.
'ಬಿಬಿಎಂಪಿಯಿಂದ ಕರೆ ಬಂದ ಬಳಿಕ ನಾವು ತಂದೆಯನ್ನು (72 ವರ್ಷ) ಕರೆದುಕೊಂಡು ಸಪ್ತಗಿರಿ ಆಸ್ಪತ್ರೆಗೆ ಹೋದೆವು. ಬಿಬಿಎಂಪಿಯವರು ನಿಮಗೆ ಹಾಸಿಗೆಯನ್ನೇ ಹಂಚಿಕೆ ಮಾಡಿಲ್ಲ. ಯಾರೋ ನಿಮ್ಮ ದಾರಿ ತಪ್ಪಿಸಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ಏನು ಮಾಡಬೇಕೆಂದೇ ತೋಚಲಿಲ್ಲ. ಈ ಬಗ್ಗೆ ಬಗ್ಗೆ ಬಿಬಿಎಂಪಿಯವರನ್ನು ಸಂಪರ್ಕಿಸಿದಾಗ, ಅದೇ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸಿದ್ದನ್ನು ಖಚಿತಪಡಿಸಿದರು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಗಮನಕ್ಕೆ ತಂದರೂ ಅವರು ನಮ್ಮ ತಂದೆಯನ್ನು ದಾಖಲಿಸಿಕೊಳ್ಳಲು ಒಪ್ಪಲಿಲ್ಲ' ಎಂದು ರೋಗಿಯ ಪುತ್ರ 'ಪ್ರಜಾವಾಣಿ'ಗೆ ತಿಳಿಸಿದರು.
'ನಮ್ಮ ಕಡೆಯವರು ಬಿಬಿಎಂಪಿ ಹಿರಿಯ ಅಧಿಕಾರಿಗಳ ಜೊತೆ ಹಾಗೂ ನೋಡಲ್ ಅಧಿಕಾರಿ ಜೊತೆ ಮಾತನಾಡಿ, ಅವರು ಸೂಚನೆ ನೀಡಿದ ಬಳಿಕ ಆಸ್ಪತ್ರೆ ಸಿಬ್ಬಂದಿ ತಂದೆಯವರನ್ನು ದಾಖಲಿಸಲು ಒಪ್ಪಿದರು. ಆದರೆ, ರೋಗಿಗೆ ಎಚ್‌ಡಿಯು ಹಾಸಿಗೆ ಒದಗಿಸಲು ಸಾಧ್ಯವಿಲ್ಲ. ಉಸಿರಾಟದಲ್ಲಿ ಏರುಪೇರಾಗಿ ಆಮ್ಲಜನಕ ಬೇಕೆಂದರೆ ನಮ್ಮಲ್ಲಿ ಸಿಗುವುದಿಲ್ಲ. ಇದೆಲ್ಲ ತಿಳಿದೂ ರೋಗಿಯನ್ನು ಇಲ್ಲೇ ದಾಖಲಿಸುವುದು ನಿಮ್ಮಿಷ್ಟ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದರು.'
'ಆಸ್ಪತ್ರೆಯವರೇ ಹೀಗೆ ಹೇಳಿದ ಬಳಿಕ ಅಲ್ಲಿ ನಮ್ಮ ತಂದೆಯವರನ್ನು ದಾಖಲಿಸುವುದರಲ್ಲಿ ಅರ್ಥವಿಲ್ಲ ಎಂದೆನಿಸಿತು. ಬಿ.ಯು.ನಂಬರ್ ಪಡೆದು ದಾಖಲಾದ ರೋಗಿಗಳಿಗೆ ಚಿಕಿತ್ಸೆ ನೀಡುವ ವಾರ್ಡ್‌ನಲ್ಲಿ ಯಾವುದೇ ಸೌಕರ್ಯಗಳೂ ಇರಲಿಲ್ಲ. ಅದನ್ನು ನೋಡಿದ ಬಳಿಕ ತಂದೆಯವರಿಗೆ ಮನೆಯಲ್ಲೇ ಆರೈಕೆ ಮಾಡಲು ನಿರ್ಧರಿಸಿದ್ದೇವೆ' ಎಂದರು.
'ದುಡ್ಡು ಕೊಟ್ಟು ಚಿಕಿತ್ಸೆ ಪಡೆಯುವ ರೋಗಿಗಳ ಜೊತೆಗೂ ಆಸ್ಪತ್ರೆಯವರು ಇದೇ ರೀತಿ ವರ್ತಿಸುತ್ತಾರೆಯೇ. ಖಾಸಗಿಯಾಗಿ ದಾಖಲಿಸುವ ರೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳುವ ಆಸ್ಪತ್ರೆಯವರು ಬಿಬಿಎಂಪಿ ವತಿಯಿಂದ ದಾಖಲಾಗುವ ರೋಗಿಗಳ ಚಿಕಿತ್ಸೆಗೆ ತಾರತಮ್ಯ ಮಾಡುವುದು ಸರಿಯೇ' ಎಂದು ಅವರು ಪ್ರಶ್ನಿಸಿದರು.
ಈ ಬಗ್ಗೆ ಸಪ್ತಗಿರಿ ಆಸ್ಪತ್ರೆಯವರನ್ನು ಸಂಪರ್ಕಿಸಿದಾಗ, 'ಆಮ್ಲಜನಕ ಕೊರತೆ ಇರುವುದು ನಿಜ. ನಾವು ವಾಸ್ತವವನ್ನು ರೋಗಿಯ ಕಡೆಯವರಿಗೆ ತಿಳಿಸಿದ್ದೇವೆ. ಆಮ್ಲಜನಕ ಸಿಗದೆ ಸಮಸ್ಯೆ ಆದರೆ ನಮ್ಮನ್ನು ದೂರಬಾರದು ಎಂಬ ಕಾರಣಕ್ಕೆ ಮೊದಲೇ ವಸ್ತುಸ್ಥಿತಿ ವಿವರಿಸಿದ್ದೇವೆ' ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಅಧಿಕಾರಿಯೊಬ್ಬರು, 'ಬಿ.ಯು.ನಂಬರ್ ಪಡೆದು ದಾಖಲಾಗುವ ರೋಗಿಗಳ ಚಿಕಿತ್ಸೆ ಬಗ್ಗೆ ಅನೇಕ ಆಸ್ಪತ್ರೆಗಳು ಕಾಳಜಿ ವಹಿಸದಿರುವುದು ನಮ್ಮ ಗಮನಕ್ಕೂ ಬಂದಿದೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರ ಕೂಡಲೇ ಇಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.
'ಬಿಬಿಎಂಪಿ ಕಳುಹಿಸಿಕೊಡುವ ರೋಗಿಗಳಲ್ಲಿ ಭಯ ಹುಟ್ಟಿಸಿ ಸಾಗ ಹಾಕುವ ಆಸ್ಪತ್ರೆಗಳು ಆ ರೋಗಿಗಳ ಚಿಕಿತ್ಸೆಗೆ ಹಂಚಿಕೆಯಾದ ಹಾಸಿಗೆಗಳನ್ನು ಖಾಸಗಿಯಾಗಿ ದಾಖಲಾಗುವ ರೋಗಿಗಳ ಆರೈಕೆಗೆ ಬಳಸಿಕೊಳ್ಳುತ್ತವೆ. ಚಿಕಿತ್ಸೆ ವೆಚ್ಚ ಭರಿಸಲಾಗದ ಬಡ ರೋಗಿಗಳಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಳ್ಳುತ್ತಿಲ್ಲ' ಎಂದು ಹೆಸರು ಬಹಿರಂಗಪಡಿಸಲು ಬಯಸದ 'ಆರೋಗ್ಯಮಿತ್ರ' ಸಿಬ್ಬಂದಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.
(ಮಾಹಿತಿ ಕೃಪೆ ಪ್ರಜಾವಾಣಿ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ